ರೈತ ವಿರೋಧಿ ಚೆಂಡುಹೂ ಕಾರ್ಖಾನೆ ಹೋರಾಟಕ್ಕೆ ರೈತ ಬಲಿ; ಜಿಲ್ಲಾಡಳಿತ ಭವನದ ಮುಂದೆ ಶವವಿಟ್ಟು ಪ್ರತಿಭಟನೆ

Update: 2017-03-28 16:13 GMT

ಚಾಮರಾಜನಗರ, ಮಾ.28: ರೈತರ ವಿರೋಧದ ನಡುವೆ ಚೀನಾ ಕಂಪೆನಿ ಆರಂಭಿಸಲು ಉದ್ದೇಶಿಸಿರುವ ಚೆಂಡೂ ಹೂ ಕಾರ್ಖಾನೆ ವಿರುದ್ದ ಹೋರಾಟಕ್ಕೆ ರೈತನೊಬ್ಬ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಗಡಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಗ್ಗಳದ ಹುಂಡಿ ಗ್ರಾಮದ ಬಳಿ ಚೀನಾ ಮೂಲದ ಕಂಪನಿಯೊಂದು ಚೆಂಡು ಹೂ ಸಂಸ್ಕರಣ ಘಟಕ ಸ್ಥಾಪನೆ ಕಳೆದ ವರ್ಷ ಭೂಮಿ ಪೂಜೆ ಮಾಡಿತ್ತು. ಅಂದಿನಿಂದಲೂ ರೈತ ಸಂಘಟನೆಗಳು ಮತ್ತು ಜಯ ಕರ್ನಾಟಕ ಸಂಘಟನೆಗಳು ಕಾರ್ಖಾನೆ ವಿರೋಧಿಸಿ ಹೋರಾಟ ನಡೆಸುತ್ತಾ ಬಂದಿದ್ದವು.

ಈ ಹೋರಾಟದಲ್ಲಿ ಭಾಗಿಯಾಗಿದ್ದ ರೈತನೊಬ್ಬನಿಗೆ ಚೀನಾ ಮೂಲಕದ ಕಂಪೆನಿಯವರು ಮಾನಸಿಕವಾಗಿ ಕಿರುಕುಳ ನೀಡುವ ಜೊತೆಗೆ ಪೊಲೀಸರ ಬಳಕೆ ಮಾಡಿ ಹಿಂಸೆ ನೀಡಿದ್ದನ್ನು ಹಾಗೂ ರೈತನ ಜಮೀನಲ್ಲಿ ಅಕ್ರಮವಾಗಿ ತಂತಿ ಬೇಲಿ ಹಾಕಿದ್ದನ್ನು ಕಂಡು ಬೇಸತ್ತು ರೈತ ನಾಗೇಶ್ ತರಕಣಾಂಬಿ ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು.

ಆತ್ಮಹತ್ಯೆಗೆ ಯತ್ನಿಸಿದ್ದ ರೈತ ನಾಗೇಶನನ್ನು ಚಿಕಿತ್ಸೆಗೆಂದು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗಿ ಮೂರುದಿನಗಳ ಕಾಲ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಮೃತಪಟ್ಟನು.

ಮಂಗಳವಾರ ಮೃತ ನಾಗೇಶನ ಶವವನ್ನು ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂದೆ ಇಟ್ಟು ರೈತರು ಪ್ರತಿಭಟನೆ ನಡೆಸಿ ಆತ್ಮಹತ್ಯೆಗೆ ಕಾರಣರಾದ ಚೀನಾ ಕಂಪನಿಯವರನ್ನು ಬಂಧಿಸಬೇಕು, ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಹಾಗೂ ಮೃತ ಕುಟುಂಬಕ್ಕೆ 50 ಲಕ್ಷರೂಪಾಯಿ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದು ಜಿಲ್ಲಾಡಳಿತ ಮುಂಭಾಗ ಮೃತ ದೇಹವನ್ನು ಇಟ್ಟು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್ ಆರ್.ಜೈನ್ ಆಗಮಿಸಿ ಮೃತ ರೈತ ನಾಗೇಶ್‌ಗೆ ಹಾರ ಹಾಕಿ ಗೌರವ ಸಲ್ಲಿಸಿದರು.

ಜಿಲ್ಲಾಧಿಕಾರಿ ಮತ್ತು ರೈತರ ನಡುವೆ ಕೆಲ ಸಮಯ ಚರ್ಚೆ ನಡೆಯಿತು. ರೈತರು ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡುತ್ತಿದ್ದರು.
ಒಟ್ಟಿನಲ್ಲಿ ರೈತರಿಗೆ ಬೇಡವಾದ ಚೀನಾ ಮೂಲದ ಚೆಂಡು ಹೂ ಸಂಸ್ಕರಣ ಘಟಕ ಆರಂಭಕ್ಕೂ ಮುನ್ನಾವೇ ರೈತನನ್ನು ಬಲಿ ತೆಗೆದುಕೊಂಡಿದ್ದು ಮಾತ್ರ ಸತ್ಯ. ರೈತರ ನೆರವಿಗೆ ಬರಬೇಕಾಗಿರುವ ಸರ್ಕಾರ ಜಿಲ್ಲಾಡಳಿ ಹಾಗೂ ಪೊಲೀಸ್ ಇಲಾಖೆ ಚೀನಾ ಕಂಪನಿಯ ಪರವಾಗಿ ನಿಂತಿರುವ ಬಗ್ಗೆ ರೈತರಲ್ಲಿ ಅನುಮಾನ ಮೂಡಲು ಕಾರಣವಾಗಿದೆ.

ಪರಿಸರಕ್ಕೆ ಮಾರಕವಾಗಿರುವ ಚೀನಾ ಮೂಲದ ಚೆಂಡು ಹೂ ಸಂಸ್ಕರಣ ಘಟಕವನ್ನು ಸ್ಥಳಾಂತರ ಮಾಡುವುದೊಂದೇ ದಾರಿಯಾಗಿದೆ ಎಂದು ರೈತರ ಮಾತಾಗಿದೆ ಈ ಬಗ್ಗೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

ಕಗ್ಗಳದಹುಂಡಿ ಗ್ರಾಮದ ನಾಗೇಶ್ ಎಂಬ ರೈತ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆಗೆ ಸಂಭಂಧಿಸಿದಂತೆ ಖಾಸಗಿ ಸಂಸ್ಥೆಯಿಂದ ತನಿಖೆ ನಡೆಸಲು ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಅಲ್ಲಿಂದ ಆದೇಶ ಬಂದ ಬಳಿಕ ತನಿಖೆ ನಡೆಯಲಿದೆ .

ಕುಲದೀಪ್‌ಕುಮಾರ್ ಆರ್.ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News