ಮದರಸ ಅಧ್ಯಾಪಕ ರಿಯಾಝ್ ಕುಟುಂಬಕ್ಕೆ ಮನೆ: ಚೆರ್ಕಳಂ ಅಬ್ದುಲ್ಲಾ

Update: 2017-03-29 10:08 GMT

ಸಿದ್ದಾಪುರ, ಮಾ.29: ಕಾಸರಗೋಡಿನಲ್ಲಿ ಹತ್ಯೆಯಾದ ಮದರಸ ಅಧ್ಯಾಪಕ ರಿಯಾಝ್  ಕುಟುಂಬಕ್ಕೆ ಮನೆ ನಿರ್ಮಿಸಿ ನೀಡುವುದಾಗಿ ಮಾಜಿ ಸಚಿವ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾಸರಗೋಡು ಜಿಲ್ಲಾಧ್ಯಕ್ಷ ಚೆರ್ಕಳಂ ಅಬ್ದುಲ್ಲಾ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪ ಕೊಟ್ಟಮುಡಿಯಲ್ಲಿರುವ ರಿಯಾಝ್ ಮುಸ್ಲಿಯಾರ್ ಅವರ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಫ್ಯಾಶಿಸ್ಟ್ ಶಕ್ತಿಗಳಿಂದ ಹತ್ಯೆಯಾದ ರಿಯಾಝ್ ಮುಸ್ಲಿಯಾರ್ ಅವರ ಕುಟುಂಬ ಕಡು ಬಡತನದಲ್ಲಿದೆ. ರಿಯಾಝ್ ಮುಸ್ಲಿಯಾರ್ ಕಾಸರಗೋಡು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು, ಕುಟುಂಬವನ್ನು ಸಂರಕ್ಷಿಸುವ ಬಾಧ್ಯತೆ ಪಕ್ಷಕ್ಕೆ ಇದೆ. ಪಕ್ಷದ ಎಲ್ಲಾ ಪದಾಧಿಕಾರಿಗಳು ಸೇರಿ ಕುಟುಂಬವನ್ನು ಭೇಟಿ ಮಾಡಲು ಆಗಮಿಸಿರುವುದಾಗಿ ತಿಳಿಸಿದ ಅವರು, ಕುಟುಂಬಕ್ಕೆ ಸ್ವಂತವಾಗಿ ಮನೆ ಇಲ್ಲದಿರವುದರಿಂದ ಸೂಕ್ತ ಜಾಗವನ್ನು ಖರೀದಿ ಮಾಡಿ ಮನೆ ನಿರ್ಮಿಸಲು ಮುಂದಾಗಿದ್ದೇವೆ. ಅಲ್ಲದೆ ಮನೆ ನಿರ್ಮಾಣದ ಹೆಸರಿನಲ್ಲಿ ಇನ್ನು ಮುಂದೆ ಯಾರೂ ಸಹ ಹಣ ಸಂಗ್ರಹದಲ್ಲಿ ತೊಡಗಬೇಡಿ ಎಂದು ಮನವಿ ಮಾಡಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ ಕಮರುದ್ದೀನ್ ಮಾತನಾಡಿ, ರಿಯಾಝ್ ಮುಸ್ಲಿಯಾರ್ ಅವರ ಹತ್ಯೆ ಅತ್ಯಂತ ಖಂಡನೀಯ. ಕಳೆದ ಹಲವಾರು ವರ್ಷಗಳಿಂದಲೂ ಆರೆಸ್ಸೆಸ್ ಮತ್ತು ಬಜರಂಗದಳ  ಉತ್ತರ ಭಾರತದ ಮಾದರಿಯಲ್ಲಿ ಕೋಮು ಗಲಭೆ ಸೃಷ್ಟಿಸಲು ಕಾಸರಗೋಡು ಜಿಲ್ಲೆಯಲ್ಲಿ ಹುನ್ನಾರ ನಡೆಸುತ್ತಿದೆ. ಇದರ ವಿರುದ್ಧ ಅನಾವಶ್ಯಕವಾಗಿ ಪ್ರತಿಕ್ರಿಯೆ ಮಾಡದೆ ಮುಸ್ಲಿಂ ಲೀಗ್ ಪಕ್ಷ ಉತ್ತಮ ರೀತಿಯ ನಿಲುವುಗಳೊಂದಿಗೆ ಕಾರ್ಯ ಪ್ರವೃತ್ತರಾಗಿರುವುದರಿಂದ ಕಾಸರಗೋಡು ಜಿಲ್ಲೆಯಲ್ಲಿ ಯಾವುದೇ ರೀತಿಯ ಗಲಭೆಗಳು ನಡೆಯದೆ ಎಲ್ಲರೂ ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದೆ.

ಮುಸಲ್ಮಾನರ ರಕ್ಷಕರು ಎನ್ನುವ ಸಿಪಿಎಂ ಪಕ್ಷ ಈ ಕೊಲೆ ಪ್ರಕರಣವನ್ನು ನಿರ್ಲಕ್ಷಿಸಿದೆ. ಕೂಡಲೇ ಕೇರಳದ ಸಿಪಿಎಂ ಸರಕಾರ ಮೌನ ಮುರಿಯಬೇಕೆಂದು ಆಗ್ರಹಿಸಿದ ಅವರು, ಎಫ್‌ಐಆರ್‌ನ ಪ್ರತಿ ಲಭಿಸಿದ ಬಳಿಕ ಚರ್ಚಿಸಿ ಮುಸ್ಲಿಂ ಲೀಗ್ ಪಕ್ಷ ರಾಜ್ಯಾದ್ಯಂತ ಶಕ್ತಿಯುತವಾದ ಹೋರಾಟ ನಡೆಸಲಿದೆ ಎಂದರು.

ಈ ಸಂದರ್ಭ ಐಯುಎಮ್‌ಎಲ್ ಪಕ್ಷದ ಪ್ರಮುಖರಾದ ಎ.ಅಬ್ದುಲ್ ರೆಹ್ಮಾನ್, ಕಲ್ಲಟ್ಟರ ಮಾಹಿನ್ ಹಾಜಿ, ಎ.ಎಂ ಕಡವತ್, ಚೆರ್ಕಳಂ ಅಬ್ದುಲ್ಲ ಕುಂಞಿ, ಮಾಹಿನ್ ಕೇಲೋಟ್, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಉಸ್ಮಾನ್ ಹಾಜಿ, ಕೊಡಗು ಜಿಲ್ಲಾ ಖಾಝಿ ಎಂ.ಎಂ ಅಬ್ದುಲ್ಲಾ ಫೈಝಿ, ನಾಪೋಕ್ಲು ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್, ಹೊದವಾಡ ಗ್ರಾ.ಪಂ ಸದಸ್ಯರಾದ ಹಂಸ, ಶಾಫಿ ಸೇರಿದಂತೆ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News