2011 ರ ಆದಿ ದ್ರಾವಿಡ ಸಂಘ ಅಸ್ತಿತ್ವದಲ್ಲಿ ಇಲ್ಲ : ಸೋಮಪ್ಪ ಸ್ಪಷ್ಟನೆ
ಮಡಿಕೇರಿ,ಮಾ.30 :ಕೊಡಗು ಜಿಲ್ಲೆಯಲ್ಲಿ ಅಸಂಘಟಿತರಾಗಿರುವ ಆದಿ ದ್ರಾವಿಡ ಸಮೂಹವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಕಾರ್ಯ ನಿರ್ವಹಿಸುತ್ತಿದ್ದು, 2011 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಂಘ ನಿಷ್ಕ್ರೀಯವಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೆಲವರು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, 2011 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಇವರುಗಳ ನೇತೃತ್ವದ ಸಂಘ ಆದಿದ್ರಾವಿಡ ಸಮುದಾಯಕ್ಕೆ ಪೂರಕವಾದ ಯಾವುದೇ ಕೆಲಸ ಕಾರ್ಯಗಳನ್ನು ನಡೆಸಿಲ್ಲವೆಂದು ಆರೋಪಿಸಿದರು.
ಪ್ರಸ್ತುತ ಸಂಘ ಸ್ಥಗಿತಗೊಂಡಿದ್ದರೂ ಯಾವುದೇ ರಶೀದಿಯನ್ನು ನೀಡದೆ ಸಮಾಜ ಬಾಂಧವರಿಂದ 150 ರೂ. ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು. ಮಂಗಳೂರಿನ ಆದಿದ್ರಾವಿಡ ಸಮಾಜ ಸೇವಾ ಸಂಘದ ದಶಮಾನೋತ್ಸವದ ಹಿನ್ನೆಲೆಯಲ್ಲಿ ವಂತಿಗೆ ಸಂಗ್ರಹಿಸುವ ರಶೀದಿ ಪುಸ್ತಕಗಳಷ್ಟೆ ತಮ್ಮ ಬಳಿ ಇದ್ದು, ತಾವು ಸಂಘದ ಹೆಸರಿನಲ್ಲಿ ಹಣವನ್ನು ಸಂಗ್ರಹಿಸುತ್ತಿಲ್ಲವೆಂದು ಸೋಮಪ್ಪ ಸ್ಪಷ್ಟಪಡಿಸಿದರು.
ವಿನಾಕಾರಣ ಟೀಕೆ ಮಾಡುವವರು ಸಾಧ್ಯವಾದರೆ ತಮ್ಮ ಸಂಘಟನೆಗೆ ಬರಲಿ ಎಂದರು. ಅನಗತ್ಯ ಆರೋಪಗಳನ್ನು ಮುಂದುವರಿಸಿದಲ್ಲಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಂಗಳೂರಿನ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸಹಕಾರದೊಂದಿಗೆ ಕಳೆೆದ ತಿಂಗಳು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘವನನ್ನು ನೋಂದಾಯಿಸಲಾಗಿದೆ ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಜಿಲ್ಲೆಯ ಗ್ರಾಮ ಗ್ರಾಮಗಳಿಗೆ ತೆರಳಿ ಸಮುದಾಯ ಬಾಂಧವರನ್ನು ಸಂಘಟಿಸುವ ಪ್ರಯತ್ನಗಳನ್ನು ನಡೆಸಲಾಗಿದೆ. ಹೋಬಳಿ ಘಟಕಗಳನ್ನು ರಚಿಸಲಾಗಿದ್ದು, ಸುಂಟಿಕೊಪ್ಪ, ಸೋಮವಾರಪೇಟೆ, ಸಿದ್ದಾಪುರ ಹೋಬಳಿ ಸಭೆೆಗಳನ್ನೂ ನಡೆಸಲಾಗಿದೆ. ಜನಾರ್ಧನ ಅವರು ಆರೋಪಿಸಿರುವಂತೆ ತಮ್ಮದು ಬೇನಾಮಿ ಸಂಘಟನೆಯಲ್ಲ, ಅಧಿಕೃತವೆಂದು ಸೋಮಪ್ಪ ಸ್ಪಷ್ಟಪಡಿಸಿದರು.
ಕಳೆದ ಮೂರು ತಿಂಗಳಿನಿಂದ ಜಿಲ್ಲಾ ಸಮಿತಿಯ ರಚನೆಗೆ ನಾವು ನಡೆಸಿರುವ ಪರಿಶ್ರಮವನ್ನು ಸಹಿಸದೆ ತಮ್ಮ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಲಾಗಿದೆ ಎಂದು ಟೀಕಿಸಿದ ಅವರು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಖಂಡಿಸುವುದಾಗಿ ತಿಳಿಸಿದರು.
ಪ್ರಮಾಣ ಪತ್ರಕ್ಕೆ ಮನವಿ
ಜಿಲ್ಲೆಯ ಆದಿ ದ್ರಾವಿಡ ಸಮೂಹಕ್ಕೆ ಇಂದಿಗೂ ಸಮರ್ಪಕ ರೀತಿಯಲ್ಲಿ ಜಾತಿ ಪ್ರಮಾಣ ಪತ್ರ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯ ಬಾಂಧವರಿಗೆ ಆದಿ ದ್ರಾವಿಡ ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಮಾ.31 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವುದಾಗಿ ಸೋಮಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಬಿ. ಬಾಬು, ಪ್ರಧಾನ ಕಾರ್ಯದರ್ಶಿ ಕೆ. ಉಮೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎ. ಉಮೇಶ್ ಹಾಗೂಹೆಚ್.ಎಸ್. ವಿನು ಉಪಸ್ಥಿತರಿದ್ದರು.