ಮಹದೇವಪ್ರಸಾದ್‌ ಕುಟುಂಬಕ್ಕೆ ಅಧಿಕಾರ ಕೊಡಬೇಕೆಂದಿದ್ದರೆ ಎಂಎಲ್‌ಸಿ ಮಾಡಿ ಅಧಿಕಾರಿ ನೀಡಿ : ರೇಣುಕಾಚಾರ್ಯ

Update: 2017-03-30 14:39 GMT

ಗುಂಡ್ಲುಪೇಟೆ. ಮಾ.30: ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪರಮ ಆಪ್ತರಾಗಿದ್ದ ಗುಂಡ್ಲುಪೇಟೆ ಕ್ಷೇತ್ರದಿಂದ ಪ್ರತಿನಿಧಿಸಿ ರಾಜ್ಯ ಸರ್ಕಾರದಲ್ಲಿ ಪ್ರಭಾವ ಸಚಿವರಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್‌ರವರ ಕುಟುಂಬಕ್ಕೆ ಮುಖ್ಯಮಂತ್ರಿಗಳು ಅಧಿಕಾರ ಕೊಡಬೇಕೆಂದಿದ್ದರೆ ಅವರ ಧರ್ಮಪತ್ನಿ ಗೀತಾ ಮಹದೇವಪ್ರಸಾದ್‌ರವರನ್ನು ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡಲಿ ಎಂದು ಮಾಜಿ ಸಚಿವ ಬಿಜೆಪಿ ಸ್ಟಾರ್ ಕ್ಯಾಂಪೇನಿಯರ್ ಎಂ.ಪಿ ರೇಣುಕಾಚಾರ್ಯ ಹೇಳಿದರು.

ಗುಂಡ್ಲುಪೇಟೆಯಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ವೇಳೆ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, ಕಳೆದ ಎರಡು ದಿನಗಳ ಹಿಂದೆ ಗುಂಡ್ಲುಪೇಟೆ ಕಾಂಗ್ರೆಸ್ ಕಛೇರಿಯಲ್ಲಿ ಸರ್ಕಾರದ ಇಂಧನ ಸಚಿವ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್‌ರವರಿಂದ ಕಣ್ಣೀರಿಸಿದ್ದು ಇದೊಂದು ನಾಟಕೀಯ ಬೆಳವಣಿಗೆಯಾಗಿದೆ ಎಂದು ಟೀಕಿಸಿದರು.

ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಸ್. ನಿರಂಜನ್‌ಕುಮಾರ್‌ರವರ ಗೆಲುವು ನಿಶ್ಚಿತ ಎಂದು ಗೊತ್ತಾಗುತ್ತಿದ್ದಂತೆ ಡಿಕೆ ಶಿವಕುಮಾರ್ ಕೃಪಾ ಪೋಷಿತ ನಾಟಕ ಮಂಡಲಿಯ ನಾಟಕ ಆರಂಭವಾಗಿದೆ ಎಂದು ವ್ಯಂಗ್ಯವಾಡಿದರು.

ಡಿಕೆ ಶಿವಕುಮಾರ್‌ರವರು ಎಂತಹ ನಾಟಕ ಪ್ರದರ್ಶನ ಮಾಡಿದರೂ ಗುಂಡ್ಲುಪೇಟೆಯಲ್ಲಿ ಬಿಜೆಪಿಗೆ ಗೆಲುವು ಗ್ಯಾರಂಟಿ ಎಂದು ಹೇಳಿದ ರೇಣುಕಾಚಾರ್ಯ, ರಾಜಕಾರಣದಲ್ಲಿ ಧರ್ಮಗುರುಗಳನ್ನು ಮಧ್ಯ ಪ್ರವೇಶ ಮಾಡುವಂತೆ ಶಿವಕುಮಾರ್ ಒತ್ತಾಯ ಮಾಡುವುದು ಸರಿಯಲ್ಲ. ಸುತ್ತೂರು ಶ್ರೀಗಳು ಈ ಭಾಗದ ಪ್ರಭಾವಿ ಧರ್ಮಗುರುಗಳಾಗಿದ್ದಾರೆ ಅವರೆಂದಿಗೂ ರಾಜಕಾರಣದ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ ಹಾಗೂ ಮುಂದೆಯೂ ಕೂಡ ಮಾಡುವುದಿಲ್ಲ ಎನ್ನುವ ವಿಶ್ವಾಸವಿದೆ ಆದರೆ ವಿನಾ ಕಾರಣ ಕಾಂಗ್ರೆಸ್ ಮುಖಂಡರುಗಳು ಸುತ್ತೂರು ಶ್ರೀಗಳನ್ನು ರಾಜಕಾರಣದ ವಿಚಾರದಲ್ಲಿ ಮಧ್ಯ ಪ್ರವೇಶಕ್ಕೆ ಮನವಿ ಮಾಡುತ್ತಿರುವುದು ಸರಿಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News