ರಿಯಾಝ್ ಕುಟುಂಬಕ್ಕೆ ಮನೆ ನಿರ್ಮಾಣ; ಚೇರ್ಕಳಂ ಅಬ್ದುಲ್ಲಾ
ಸಿದ್ದಾಪುರ, ಮಾ.30: ಕಾಸರಗೋಡಿನಲ್ಲಿ ಹತ್ಯೆಯಾದ ರಿಯಾಝ್ ಮುಸ್ಲಿಯಾರ್ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವುದಾಗಿ ಮಾಜಿ ಸಚಿವ ಹಾಗೂ ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ಕಾಸರಗೋಡು ಜಿಲ್ಲಾಧ್ಯಕ್ಷ ಚೇರ್ಕಳಂ ಅಬ್ದುಲ್ಲಾ ತಿಳಿಸಿದ್ದಾರೆ.
ರಿಯಾಝ್ ಮುಸ್ಲಿಯಾರ್ ಅವರ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫ್ಯಾಶಿಸ್ಟ್ ಶಕ್ತಿಗಳಿಂದ ಹತ್ಯೆಯಾದ ರಿಯಾಝ್ ಮುಸ್ಲಿಯಾರ್ ಅವರ ಕುಟುಂಬ ಕಡು ಬಡತನದಲ್ಲಿದೆ ಎಂದರು.
ರಿಯಾಝ್ ಮುಸ್ಲಿಯಾರ್ ಕಾಸರಗೋಡು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು, ಕುಟುಂಬವನ್ನು ಸಂರಕ್ಷಿಸುವ ಬಾಧ್ಯತೆ ಪಕ್ಷಕ್ಕೆ ಇರುವುದರಿಂದ ಪಕ್ಷದ ಎಲ್ಲ್ಲ ಪದಾಧಿಕಾರಿಗಳು ಸೇರಿ ಕುಟುಂಬವನ್ನು ಭೇಟಿ ಮಾಡಲು ಆಗಮಿಸಿರುವುದಾಗಿ ತಿಳಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಕಮರುದ್ದೀನ್ ಮಾತನಾಡಿ, ರಿಯಾಝ್ ಹತ್ಯೆ ಅತ್ಯಂತ ಖಂಡನೀಯ. ಕಳೆದ ಹಲವಾರು ವರ್ಷಗಳಿಂದಲೂ ಆರೆಸ್ಸೆಸ್ ಮತ್ತು ಬಜರಂಗದಳ ಸೇರಿದಂತೆ ಫ್ಯಾಶಿಸ್ಟ್ ಕೂಟವು ಉತ್ತರ ಭಾರತದ ಮಾದರಿಯಲ್ಲಿ ಗೋಮು ಗಲಭೆ ಸೃಷ್ಟಿಸಲು ಕಾಸರಗೋಡು ಜಿಲ್ಲೆಯಲ್ಲಿ ಹುನ್ನಾರ ನಡೆಸುತ್ತಿದೆ ಎಂದರು.
ಈ ಸಂದರ್ಭ ಐಯುಎಂಎಲ್ ಪಕ್ಷದ ಪ್ರಮುಖರಾದ ಎ. ಅಬ್ದುರ್ರೆಹ್ಮಾನ್, ಕಲ್ಲಟ್ಟರ ಮಾಹಿನ್ ಹಾಜಿ, ಎ.ಎಂ. ಕಡವತ್, ಚೇರ್ಕಳಂ ಅಬ್ದುಲ್ಲ ಕುಂಞಿ ಮಾಹಿನ್ ಕೇಲೋಟ್, ಸಿದ್ದಾಪುರಮುಸ್ಲಿಂಜಮಾಅತ್ ಅಧ್ಯಕ್ಷ ಕೆ.ಉಸ್ಮಾನ್ ಹಾಜಿ, ಕೊಡಗು ಜಿಲ್ಲಾ ಖಾಝಿ ಎಂ.ಎಂ. ಅಬ್ದುಲ್ಲಾ ಫೈಝಿ, ನಾಪೊಕ್ಲು ಗ್ರಾಪಂ ಅಧ್ಯಕ್ಷ ಇಸ್ಮಾಯೀಲ್, ಹೊದವಾಡ ಗ್ರಾಪಂ ಸದಸ್ಯರಾದ ಹಂಝ, ಶಾಫಿ ಸೇರಿದಂತೆ ಮತ್ತಿತರರು ಇದ್ದರು.