ಸಿದ್ದರಾಮಯ್ಯ ಸರಕಾರದ ಐತಿಹಾಸಿಕ ಕ್ರಮ

Update: 2017-03-30 18:53 GMT

ಕರ್ನಾಟಕದ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯುವಂತಹ ಜನಪರ ಮಸೂದೆಯೊಂದನ್ನು ಈ ಸಲದ ವಿಧಾನಮಂಡಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ನಾಲ್ಕು ದಶಕಗಳ ಹಿಂದೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಭೂಸುಧಾರಣ ಕಾನೂನಿಗೆ ತಿದ್ದುಪಡಿ ತಂದು ‘ಉಳುವವನನ್ನು ಹೊಲದೊಡೆಯ’ನನ್ನಾಗಿ ಮಾಡಿದರು. ಅದಾಗಿ ಬರೋಬ್ಬರಿ 40 ವರ್ಷಗಳ ಆನಂತರ ಸಮಾಜವಾದಿ ಸಿದ್ದರಾಮಯ್ಯ ಸರಕಾರ ರಾಜ್ಯಾದ್ಯಂತ ದಾಖಲೆ ಇಲ್ಲದ ಜನವಸತಿ ಪ್ರದೇಶಗಳನ್ನು ‘ಕಂದಾಯ ಗ್ರಾಮ’ಗಳನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ದಾಖಲೆ ಇಲ್ಲದ ಜನವಸತಿ ಪ್ರದೇಶಗಳಾದ ಲಂಬಾಣಿ ತಾಂಡ, ದೊಡ್ಡಿ, ಹಟ್ಟಿ, ಪಾಳ್ಯ ಮುಂತಾದ 50 ಸಾವಿರಕ್ಕೂ ಹೆಚ್ಚು ಸ್ಥಳಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸುವ ‘ಕರ್ನಾಟಕ ಭೂಸುಧಾರಣಾ (ತಿದ್ದುಪಡಿ) ಮಸೂದೆ’ಗೆ ವಿಧಾನಮಂಡಲದ ಉಭಯ ಸದನ ಒಮ್ಮತದ ಅಂಗೀಕಾರ ನೀಡಿದೆ. ಸಮಾಜವಾದಿ ಚಳವಳಿಯ ಹಿನ್ನೆಲೆಯಿಂದ ಬಂದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಂಡಿಸಿದ ಈ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲದ ಎರಡೂ ಸದನಗಳು ಒಮ್ಮತದಿಂದ ಸ್ವೀಕರಿಸಿವೆ.

‘‘ಇದೊಂದು ಪ್ರಗತಿಪರ ಮಸೂದೆ’’ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ವಾಗತಿಸಿದ್ದಾರೆ. ‘‘ಇದು ಪ್ರಗತಿಪರ ಅಲ್ಲ, ಕ್ರಾಂತಿಕಾರಿ ಮಸೂದೆ’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಿಜ ಇದೊಂದು ಕ್ರಾಂತಿಕಾರಿ ಮಸೂದೆ. ಆಸರೆಗೆ ಒಂದು ಸೂರು ಇಲ್ಲದೆ ದಶಕಗಳ ಕಾಲ ಆತಂಕದಲ್ಲೇ ಬದುಕುತ್ತಿದ್ದ ಲಕ್ಷಾಂತರ ಬಡವರು, ಬುಡಕಟ್ಟು ಸಮುದಾಯದವರು, ಅಲೆಮಾರಿ ಜನವರ್ಗಗಳು ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ತಿದ್ದುಪಡಿಯ ಪರಿಣಾಮವಾಗಿ ಈಗ ಅವರು ವಾಸಿಸುತ್ತಿರುವ ಜಾಗದ ಮಾಲಕತ್ವದ ಹಕ್ಕುಪತ್ರ(ಪಟ್ಟಾ) ಸಿಗುತ್ತದೆ. ಇದೇನು ಸಾಮಾನ್ಯ ಸಂಗತಿಯಲ್ಲ. ಅಂತಲೇ ಇದನ್ನು ಐತಿಹಾಸಿಕ ಕ್ರಮ ಎಂದು ವರ್ಣಿಸಿದರೆ ತಪ್ಪಲ್ಲ.

ತಾವು ವರ್ಷಗಳ ಕಾಲ ವಾಸಿಸುತ್ತಿದ್ದ ಜಾಗದ ಮಾಲಕತ್ವ ಲಭ್ಯವಿಲ್ಲದ ಕಾರಣಕ್ಕಾಗಿ ರಸ್ತೆ, ವಿದ್ಯುತ್, ನೀರು ಸೇರಿದಂತೆ ಎಲ್ಲ ನಾಗರಿಕ ಸೌಲಭ್ಯಗಳಿಂದಲೂ ಇವರು ವಂಚಿತರಾಗಿದ್ದರು. ಈ ಜಾಗದಲ್ಲಿ ಹಲವಾರು ದಶಕಗಳ ಕಾಲ ನೆಲೆಸಿದ ಲಂಬಾಣಿ, ಗೌಳಿಗ ಮುಂತಾದ ಜನ ಸಮುದಾಯಗಳು ಈಗ ನೆಮ್ಮದಿಯಿಂದ ಉಸಿರಾಡುವಂತಾಗಿದೆ. ನಾಳೆ ಹೇಗೋ ಏನೋ ಎಂಬ ಆತಂಕ ಈಗ ನಿವಾರಣೆಯಾಗಿದೆ. ಇನ್ನು ಮುಂದೆ ಯಾವುದೇ ಆತಂಕವಿಲ್ಲದೆ ಇವರು ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ. ಇಂತಹದೊಂದು ದಿಟ್ಟ ಕ್ರಮ ಕೈಗೊಳ್ಳಲು ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು. ರಾಜಕೀಯ ಇಚ್ಛಾಶಕ್ತಿಯ ಜೊತೆಗೆ ಸಾಮಾಜಿಕ ಕಾಳಜಿಯ ಬದ್ಧತೆ ಇರಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಾವು ನಂಬಿಕೊಂಡು ಬಂದ ಸಿದ್ಧಾಂತಕ್ಕೆ ಬದ್ಧತೆ ತೋರಿಸುವ ಮೂಲಕ ಲಕ್ಷಾಂತರ ಜನರ ಬದುಕಿಗೆ ನೆಮ್ಮದಿಯ ಆಸರೆ ಒದಗಿಸಿದ್ದಾರೆ. ಯಾವುದೇ ಸರಕಾರಿ ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಜನರು ತಮಗೆ ಹಕ್ಕು ಪತ್ರ ನೀಡಬೇಕೆಂದು ಹಲವು ವರ್ಷಗಳಿಂದ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದರು. ಹಿಂದಿನ ಸರಕಾರಗಳು ಶಾಶ್ವತ ಹಕ್ಕುಪತ್ರ ನೀಡುವ ಬದಲಿಗೆ ಒಂದಿಷ್ಟು ಸೌಲಭ್ಯಗಳನ್ನು ನೀಡಿ ಕೈತೊಳೆದುಕೊಂಡಿದ್ದವು. ಆದರೆ, ತಾವು ನೆಲೆಸಿರುವ ಜಾಗದ ಮಾಲಕತ್ವದ ಹಕ್ಕುಪತ್ರ ಇಲ್ಲದ ಜನರು ಸರಕಾರದಿಂದ ಕಾನೂನುಬದ್ಧವಾಗಿ ದೊರೆಯುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ವಾಸ್ತವವಾಗಿ ಸರಕಾರದ ದೃಷ್ಟಿಯಲ್ಲಿ ಅವರು ಲೆಕ್ಕಕ್ಕೇ ಇರಲಿಲ್ಲ. ಜನಗಣತಿ ಹಾಗೂ ಚುನಾವಣೆ ಬಂದಾಗ ಮತದಾರರ ಪಟ್ಟಿಯಲ್ಲಿ ಅವರ ಹೆಸರು ದಾಖಲಾಗುತ್ತಿತ್ತು. ಚುನಾವಣೆ ಬಂದಾಗ ರಾಜಕಾರಣಿಗಳು ಈ ಜನರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದರು. ಇದರಿಂದ ವೈಯಕ್ತಿಕವಾಗಿ ಈ ಜನರಿಗೆ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಆದರೆ ಈ ಸರಕಾರ ಹಾಗೆ ಮಾಡಲಿಲ್ಲ.

ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರ ಕಾಲದಲ್ಲಿ ‘ಉಳುವವನೇ ಭೂಮಿಯ ಒಡೆಯ’ ಎಂಬ ಐತಿಹಾಸಿಕ ನಿರ್ಧಾರ ಕೈಗೊಂಡಂತೆ, ಅಷ್ಟೇ ಮಹತ್ವದ ನಿರ್ಧಾರವನ್ನು ಈ ಸರಕಾರ ಕೈಗೊಂಡಿದೆ. ದೇವರಾಜ ಅರಸು ಅವರ ಉತ್ತರಾಧಿಕಾರಿಯೆಂದು ಜನಸಾಮಾನ್ಯರಿಂದ ಶ್ಲಾಘನೆಗೆ ಒಳಗಾಗಿರುವ ಸಿದ್ದರಾಮಯ್ಯನವರು ಇಂತಹದೊಂದು ಮಸೂದೆ ತಂದು ಅರಸು ನಂತರದ ಕಾಲಘಟ್ಟದಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಈ ಮಸೂದೆ ಮಂಡನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಷ್ಟೇ ಪ್ರಮುಖವಾದ ಪಾತ್ರವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಹಿಸಿದ್ದಾರೆ. ಸಾಗರ ತಾಲೂಕಿನ ಗೇಣಿದಾರರ ಹೋರಾಟದ ಹಿನ್ನೆಲೆಯಿಂದ ಬಂದ ಕಾಗೋಡು ತಿಮ್ಮಪ್ಪನವರು ವಿಧಾನಸಭಾಧ್ಯಕ್ಷರಾಗಿದ್ದಾಗಲೂ ಈ ಅವಕಾಶ ವಂಚಿತ ಸಮುದಾಯಗಳ ಪರವಾಗಿ ಮಾತನಾಡುತ್ತಿದ್ದರು. ಈಗ ಅವರೇ ಕಂದಾಯ ಸಚಿವರಾಗಿ ನುಡಿದಂತೆ ನಡೆದುಕೊಂಡಿದ್ದಾರೆ. ಪ್ರತಿಪಕ್ಷ ನಾಯಕರು ಕೂಡಾ ಇದರಲ್ಲಿ ರಾಜಕೀಯ ಮಾಡದೆ ಮಸೂದೆ ಅಂಗೀಕಾರಕ್ಕೆ ಸಹಕಾರ ನೀಡಿದ್ದಾರೆ.

ಆದರೆ, ಈ ಮಸೂದೆಯನ್ನು ಅಂಗೀಕರಿಸಿದ ಮಾತ್ರಕ್ಕೆ ಈ ಜನರ ಸಮಸ್ಯೆಗಳು ಸಂಪೂರ್ಣ ನಿವಾರಣೆ ಆಗುವುದಿಲ್ಲ. ಈ ತಿದ್ದುಪಡಿ ಮಸೂದೆ ಕಾನೂನಾದ ಬಳಿಕ ಅದನ್ನು ಜಾರಿಗೊಳಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಜನರಿಗೆ ಅವರ ಜಾಗದ ಮಾಲಕತ್ವವನ್ನು ನೋಂದಣಿ ಮಾಡಿಸುವಾಗ ಅವರಿಗೆ ಯಾವುದೇ ತೊಂದರೆಯಾಗಬಾರದು. ನೋಂದಣಿ ಮಾಡುವ ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುವ ಸಾಧ್ಯತೆ ಇದೆ. ಆ ರೀತಿ ಆಗದಂತೆ ಸರಕಾರ ನೋಡಿಕೊಳ್ಳಬೇಕು. ಈ ಸಮುದಾಯಗಳು ಗ್ರಾಮಪಂಚಾಯತ್ ವ್ಯಾಪ್ತಿಗೆ ಬಂದ ಆನಂತರ ಒಂದಷ್ಟು ಪೂರಕ ಬದಲಾವಣೆಗಳು ಆಗುತ್ತವೆ. ಕೆಲ ಗೊಂದಲಗಳೂ ಉಂಟಾಗುತ್ತವೆ. ಯಾರದ್ದಾದರೂ ಖಾಸಗಿ ಮಾಲಕತ್ವದಲ್ಲಿ ಇರುವ ಜಾಗಗಳಲ್ಲಿ ಈ ಜನವಸತಿ ಪ್ರದೇಶಗಳಿದ್ದರೆ ತಿದ್ದುಪಡಿ ಕಾಯ್ದೆಯ ಪ್ರಕಾರ ಅದು ಮೂಲ ಮಾಲಕರ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ಇಂತಹ ವಿಷಯಗಳಲ್ಲಿ ಎಚ್ಚರ ವಹಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಾಯ್ದೆ ಕೇವಲ ದಾಖಲೆಯಾಗಿಯಷ್ಟೇ ಉಳಿಯಬಾರದು. ಪೂರ್ಣ ಪ್ರಮಾಣದಲ್ಲಿ ಮತ್ತು ತುರ್ತಾಗಿ ಅನುಷ್ಠಾನಕ್ಕೆ ಬರುವಂತೆ ಸರಕಾರ ನೋಡಿಕೊಳ್ಳಬೇಕು.

ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನಿರ್ಗತಿಕರಿಗೆ ಹಾಗೂ ಬಡ ಸಮುದಾಯಗಳಿಗೆ ನೆಲೆ ಒದಗಿಸುವ ನಿಜವಾದ ಸಮಾಜ ಕಲ್ಯಾಣ ಯೋಜನೆ ಇದು. ಅಂತಲೇ ಪಕ್ಷಭೇದ ಮರೆತು ಎಲ್ಲರೂ ಇದನ್ನು ಸ್ವಾಗತಿಸಬೇಕಾಗಿದೆ. ಇಂತಹ ಯೋಜನೆಗಳ ಬಗ್ಗೆ ಅಪಸ್ವರ ತೆಗೆಯುವವರಿರುತ್ತಾರೆ. ಅದಕ್ಕೆ ಸರಕಾರ ಕಿವಿಗೊಡಬಾರದು. ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಬದಲಾವಣೆಗೆ ಬದ್ಧವಾಗಿರುವ ನೂರಾರು ತರುಣ ನ್ಯಾಯವಾದಿಗಳು, ಸಾಮಾಜಿಕ ಕಾರ್ಯಕರ್ತರು ಈ ಜನಪರ ಯೋಜನೆಯ ಜಾರಿಗೆ ಶ್ರಮಿಸಬೇಕಾಗಿದೆ. ಆಗ ಮಾತ್ರ ಈ ಕಾನೂನಿನ ಉದ್ದೇಶ ಸಾರ್ಥಕವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News