ದಲಿತನ ಸಾಮಾಜಿಕ ಬಹಿಷ್ಕಾರ: ಆತ್ಮಹತ್ಯೆಗೆ ಯತ್ನಿಸಿದ ದಲಿತ ವ್ಯಕ್ತಿ
ಗುಂಡ್ಡ್ಲುಪೇಟೆ, ಮಾ.31: ಸ್ವಜಾತಿಯವರಿಂದಲೇ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ವಿಷ ಸೇವಿಸಿರುವ ಘಟನೆ ತಾಲೂಕಿನ ಬೇರಂಬಾಡಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಗ್ರಾಮದ ದಲಿತ ಜಾತಿಯವರಾದ ಗೋಪಾಲಯ್ಯ(55) ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಗ್ರಾಮಪಂಚಾಯತ್ ವತಿಯಿಂದ ನೀಡಿದ್ದ ನಿವೇಶನದಲ್ಲಿ ಸಾರ್ವಜನಿಕರು ಓಡಾಡಲು ರಸ್ತೆಗೆ ಬಿಟ್ಟುಕೊಡುವಂತೆ ಗ್ರಾಮದ ಮುಖಂಡರು ಆತನ ಮೇಲೆ ಮೊದಲಿನಿಂದಲೂ ಒತ್ತಡ ಹೇರುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ ಕಳೆದ ತಿಂಗಳು ತನ್ನ ಜನಾಂಗದ ವತಿಯಿಂದ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಈ ಬಗ್ಗೆ ಗೋಪಾಲನಾಯ್ಕನ ಕರಿಯಯ್ಯ ಎಂಬುವರು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಉಪಯೋಗವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಗ್ರಾಮದ ಎಲ್ಲಾ ಜನಾಂಗಗಳ ಮುಖಂಡರು ಗೋಪಾಲಯ್ಯನ ಮನೆಯನ್ನು ಉರುಳಿಸಲು ಮುಂದಾಗಿದ್ದಾಗ ತಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮನನೊಂದು ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾದರು. ಕೂಡಲೇ ಗೋಪಾಲಯ್ಯನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿಗೆ ಕರೆದೊಯ್ಯಲಾಯಿತು.
ಈ ಬಗ್ಗೆ ಗೋಪಾಲಯ್ಯನ ಅಳಿಯ ಕರಿಯಯ್ಯ ಪಟ್ಟಣ ಠಾಣೆಯಲ್ಲಿ ಗ್ರಾಮದ ಯಜಮಾನರ ವಿರುದ್ದ ಹಾಗೂ ಮುಖಂಡರು ಗೋಪಾಲಯ್ಯನ ವಿರುದ್ದ ದೂರು ನೀಡಿದ್ದಾರೆ.