×
Ad

ಪೊಲೀಸ್ ವ್ಯಾನ್ - ಕಾರು ಢಿಕ್ಕಿ: ಹಲವರಿಗೆ ಗಾಯ

Update: 2017-03-31 20:37 IST

ಮಂಡ್ಯ, ಮಾ.31: ಪೊಲೀಸ್ ವ್ಯಾನ್ ಮತ್ತು ಕಾರು ಢಿಕ್ಕಿಯಾಗಿ ಹಲವರು ಗಾಯಗೊಂಡಿರುವ ಘಟನೆ ಮದ್ದೂರು ಪೊಲೀಸ್ ಠಾಣೆ ಎದುರಿನ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಕಾರಿನಲ್ಲಿದ್ದ ನೆಲಮಂಗಲ ತಾಲೂಕಿನ ಹುಲ್ಲರೆ ಗ್ರಾಮದ ಗೋವಿಂದರಾಜು, ಅಮೂಲ್ಯ, ಅಭಿಕುಮಾರ್, ಪೊಲೀಸ್ ವ್ಯಾನ್‌ನಲ್ಲಿದ್ದ ಮದ್ದೂರು ತಾಲೂಕು ಮರಳಿಗ ಗ್ರಾಮದ ಚಲುವ, ಸುರೇಶ್, ಇತರರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಮರಳಿಗ ಗ್ರಾಮದಲ್ಲಿ ಎಂಎಎಸ್‌ಐಎಲ್ ಮದ್ಯ ಮಳಿಗೆ ಸಂಬಂಧ ವಿರೋಧ ವ್ಯಕ್ತಪಡಿಸಿದ ಕೆಲವರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿ, ಮದ್ದೂರು ಠಾಣೆಗೆ ಕರೆತರುವಾಗ ಬೆಂಗಳೂರು ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಿಗೆ ಪೊಲೀಸ್ ವ್ಯಾನ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ತೀವ್ರವಾಗಿ ಗಾಯಗೊಂಡಿದ್ದರೆ, ಪೊಲೀಸ್ ವ್ಯಾನ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನಲ್ಲಿದ್ದ ಗೋವಿಂದರಾಜು ಎಂಬುವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ದೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News