ಕುಶಾಲನಗರ: ಆತ್ಮಹತ್ಯೆಗೈದ ಸ್ಥಿತಿಯಲ್ಲಿ ವಿವಾಹಿತೆಯ ಶವ ಪತ್ತೆ
ಕೊಲೆ ಶಂಕೆ ಕುಶಾಲನಗರ, ಮಾ.31: ಸಮೀಪದ ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೇನುಕಲ್ಲುಬೆಟ್ಟದ ನಿವಾಸಿ ವಿವಾಹಿತ ಮಹಿಳೆ ಸ್ವಾತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವ ಪತ್ತೆಯಾದ ಘಟನೆ ಶುಕ್ರವಾರ ವರದಿಯಾಗಿದೆ.
ಜೇನುಕಲ್ಲುಬೆಟ್ಟದ ನಿವಾಸಿಗಳಾದ ಮಲ್ಲಯ್ಯ ಮತ್ತು ಶಿವಮ್ಮ ಎಂಬವರ ಪುತ್ರಿಯಾಗಿದ್ದು, ಈಕೆಯನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಹುಲುಸೆ ಗ್ರಾಮದ ಹರೀಶ್ ಎಂಬಾತನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಹರೀಶ್ ಲಾರಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸ್ವಾತಿ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ವಾತಿ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ, ಸ್ವಾತಿ ಹೆತ್ತವರು ಕೊಲೆ ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಕೃಷ್ಣ , ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮಹೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.