×
Ad

​ಹೆಡ್ ಕಾನ್‌ಸ್ಟೇಬಲ್ ಎಸಿಬಿ ಬಲೆಗೆ

Update: 2017-03-31 23:09 IST

 ಶಿವಮೊಗ್ಗ, ಮಾ. 31: ಕಲ್ಲು ಗಣಿ ನಡೆಸುವ ವ್ಯಕ್ತಿಯೋರ್ವರಿಂದ 3000 ರೂ. ಲಂಚ ಸ್ವೀಕರಿಸುತ್ತಿದ್ದ ಪೊಲೀಸ್ ಮುಖ್ಯ ಪೇದೆಯೋರ್ವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣಾ ಸಮೀಪ ವರದಿಯಾಗಿದೆ.

ಶ್ರೀಕಾಂತ್ ಎಸಿಬಿ ಬಲೆಗೆ ಬಿದ್ದ ಹೆಡ್ ಕಾನ್‌ಸ್ಟೇಬಲ್ ಎಂದು ಗುರುತಿಸಲಾಗಿದ್ದು, ಇವರನ್ನು ಎಸಿಬಿ ಪೊಲೀಸರು ಬಂಧಿಸಿ ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆ 1988ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಂಚಕ್ಕೆ ಡಿಮ್ಯಾಂಡ್: ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ತ್ಯಾಗರ್ತಿ ಗ್ರಾಮದ ನಿವಾಸಿಯೋರ್ವರು ಕಲ್ಲು ಗಣಿಯಲ್ಲಿ ಸ್ಟೋನ್ ಕಟ್ಟಿಂಗ್ ಕೆಲಸ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಸ್ತುತ ಸದರಿ ಸ್ಥಳದಲ್ಲಿ ಪುನಃ ಗಣಿಗಾರಿಕೆ ನಡೆಸುವ ಪ್ರಯತ್ನದೊಂದಿಗೆ ಸ್ಥಳೀಯ ಪೊಲೀಸರ ಅನುಮತಿ ಕೋರಿದ್ದರು ಎನ್ನಲಾಗಿದೆ. ಈ ಸಂಬಂಧ ಹೆಡ್ ಕಾನ್‌ಸ್ಟೇಬಲ್ ಶ್ರೀಕಾಂತ್‌ರವರು ಪುನಃ ಗಣಿಗಾರಿಕೆ ನಡೆಸಬೇಕಾದರೆ ತಿಂಗಳಿಗೆ 3000 ರೂ. ಹಣ ನೀಡುವಂತೆ ಅರ್ಜಿದಾರರಿಗೆ ಒತ್ತಾಯಿಸಿದ್ದರು.

ಈ ಕುರಿತಂತೆ ಅರ್ಜಿದಾರರು ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಅರ್ಜಿದಾರರು ಶ್ರೀಕಾಂತ್‌ರವರಿಗೆ ಹಣ ನೀಡುವ ವೇಳೆ ಕಾರ್ಯಾಚರಣೆ ನಡೆಸಿದ ಎಸಿಬಿ ಪೊಲೀಸರು ಶ್ರೀಕಾಂತ್‌ರನ್ನು 3000 ರೂ. ಲಂಚದ ಹಣದ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಶಿವಮೊಗ್ಗ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News