ಸ್ವಂತ ಹಣದಲ್ಲಿ ಕೆರೆ ಅಭಿವೃದ್ಧಿ..! ; ಇದು ಉತ್ತರ ಕರ್ನಾಟಕದ ಹಳ್ಳಿಯ ಕಥೆ...!

Update: 2017-03-31 17:45 GMT

ಇದು ಈ ಜನರ ಜೀವಜಲದ ಜೀವಗಂಗೆಯ ಸ್ಥಳ. ಆದೆರೆ ಸತತ ಬರದಿಂದ ಆ ಕೆರೆ ನೀರಿಗಾಗಿ ಬಾಯಿ ತೆರೆದಿತ್ತು. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸ್ವತ: ಈ ಗ್ರಾಮದ ಜನರೆ ಕೆರೆ ಹೂಳು ತೆಗೆಯಲು ಮುಂದಾಗಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ಇದಕ್ಕಾಗಿ ಲಕ್ಷಾಂತರ ಹಣವಿದ್ದರು, ಆ ಹಣ ಗ್ರಾಮದ ಅಭಿವೃದ್ಧಿಗೆ ಬಳಸಿಕೊಂಡು ತಮ್ಮ ಸ್ವಂತ ಹಣದಲ್ಲಿ ಕೆರೆ ಹೂಳು ತೆಗಿತಿರೋದು ಈ ಗ್ರಾಮಸ್ಥರ ಕಾರ್ಯ ಶ್ಲಾಘನೀಯ.

ಹೌದು ಇದು ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಕಂಡು ಬರುವ ಗ್ರಾಮಸ್ಥರ ಕಳಕಳಿ. ಜಕ್ಕಲಿ ಗ್ರಾಮದ ಅಬ್ಬಿಗೇರಿ ರಸ್ತೆಯಲ್ಲಿರುವ 4 ಎಕರೆ ಪ್ರದೇಶದ ಕೆರೆ ಹೂಳು ತೆಗೆಯುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಖುದ್ದು ಗ್ರಾಮಸ್ಥರೆ ಪಣತೊಟ್ಟು ನಿಂತಿದ್ದಾರೆ. ಎಂಥಹ ಬೇಸಿಗೆಯಲ್ಲೂ ಸಹ ಈ ಕೆರೆ ಬತ್ತಿದ ಘಟನೆ ಈ ತನಕ ನಡೆದಿರಲಿಲ್ಲ. ಗ್ರಾಮದ ಸುಮಾರು 10 ಸಾವಿರ ಜನರಿಗೆ ಈ ಕೆರೆ ಜೀವಾಳವಾಗಿತ್ತು. ಆದರೆ ಸತತ ನಾಲ್ಕು ವರ್ಷಗಳ ಬರದ ಛಾಯೆಯಿಂದ ಈ ವರ್ಷ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿದೆ. ಅಷ್ಟೆ ಅಲ್ಲ, ಕೆರೆ ಸಂಪೂರ್ಣವಾಗಿ ಹೂಳಿನಿಂದ ತುಂಬಿಕೊಂಡಿದೆ. 

ಇದನ್ನರಿತ ಜಕ್ಕಲಿ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯವರು ಗ್ರಾಮದ ಕೆರೆ ಅಭಿವೃದ್ಧಿಗಾಗಿ 10 ಲಕ್ಷ ಹಣ ತೆಗೆದಿಡಲಾಗಿತ್ತು. ಆದರೆ ಗ್ರಾಮಸ್ಥರೆಲ್ಲರೂ ಒಮ್ಮತದ ನಿರ್ಣಯ ತೆಗೆದುಕೊಂಡು, ಕೆರೆಗೆ ಅಂತಲೇ  ಕಾಯ್ದಿಟ್ಟ 10 ಲಕ್ಷ ಹಣ ಕೆರೆ ಹೂಳೆತ್ತಲು ಬಲಕಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತ ಪಡಿಸಿ, ಆ ಹಣ ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಣಯಿಸಿದ್ದರು.

ಸ್ವತ: ತಾವೇ ಹಣ ಖರ್ಚು ಮಾಡಿ ಇದೀಗ ಕೆರೆ ಹೂಳು ತೆಗಿತಿರೋದು ಮಾತ್ರ ಸುತ್ತಲಿನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೆರೆ ಹೂಳೆತ್ತಲು ಸರ್ಕಾರ ಅನುದಾನ ನೀಡಿದರು ಆ ಅನುದಾನ ಬೇರೆ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿದ ಈ ಗ್ರಾಮದ ಜನರ  ಗುಣ ನಿಜಕ್ಕೂ ಮೆಚ್ಚುವಂತಹದ್ದು

ಕೆರೆಯಲ್ಲಿ ಘರ್ಜಿಸುತ್ತಿವೆ ಜೆಸಿಬಿ, ಟ್ರ್ಯಾಕ್ಟರ್..!

ತಮ್ಮ ಸ್ವಂತ ಶ್ರಮದ ಲಕ್ಷ ಲಕ್ಷ ಹಣ ಖರ್ಚು ಮಾಡಿ ಗ್ರಾಮಸ್ಥರಿಂದಲೇ ಕೆರೆ ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಜಕ್ಕಲಿ ಗ್ರಾಮಸ್ಥರ ಮುತವರ್ಜಿಗೆ ಎರಡು ಜೆಸಿಬಿಗಳು ಕೆರೆಯಲ್ಲಿ ಸತತ ಕಾರ್ಯ ನಿರ್ವಹಿಸುತ್ತಿವೆ. 30ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಹಾಗೂ  ನಿತ್ಯ ನೂರಾರು ಟಿಪ್ಪರ್ ಗಳು ಕೆರೆಯ ಹೂಳು ತೆಗೆಯುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಹೂಳು ತೆಗೆದ ಒಂದು ಟ್ರಿಪ್ ಮಣ್ಣಿಗೆ ಜೆಸಿಬಿಗೆ 100  ರೂಪಾಯಿ ಹಣವನ್ನು ರೈತರು ನೀಡಿ, ಮತ್ತೆ ಅದೇ ಮಣ್ಣನ್ನು ತಮ್ಮ ಹೊಲಕ್ಕೆ ಹಾಕಿಸಿಕೊಳ್ಳುತ್ತಿದ್ದಾರೆ. 

Writer - ಫಾರೂಕ್ ಮಕಾನದಾರ

contributor

Editor - ಫಾರೂಕ್ ಮಕಾನದಾರ

contributor

Similar News