ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
ಮಂಡ್ಯ, ಮಾ.31: ಸಾಲಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಳೇಬೂದನೂರು ಗ್ರಾಮದಲ್ಲಿ ನಡೆದಿದೆ.
ಮಾ.26 ರಂದು ಹಿಪ್ಪುನೇರಳೆ ಬೆಳೆಗೆ ಸಿಂಪಡಿಸುವ ಔಷಧಿ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಮಹಾದೇವು (48), ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಮೃತಪಟ್ಟರು.
ಮಹಾದೇವ ಅವರು 30 ಗುಂಟೆ ಜಮೀನು ಹೊಂದಿದ್ದು, ಜತೆಗೆ ಎರಡು ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ಕೈಗೊಂಡಿದ್ದರು. ಆದರೆ, ಬೆಳೆನಷ್ಟ ಅನುಭವಿಸಿದ್ದರು.
ಕೃಷಿ ಚಟುವಟಿಕೆಗಾಗಿ ಸ್ಥಳೀಯ ಕೃಷಿಪತ್ತಿನ ಸಹಕಾರ ಸಂಘದಲ್ಲಿ 28 ಸಾವಿರ ರೂ. ಸೇರಿದಂತೆ ಖಾಸಗಿಯಾಗಿ ಸಾವಿರಾರು ರೂ.ಗಳ ಸಾಲ ಮಾಡಿಕೊಂಡಿದ್ದು, 30 ಗುಂಟೆ ಜಮೀನು ಮಾರಿದ್ದರೂ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಮಹಾದೇವ ವೃದ್ಧ ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.