ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಗಳ ದಾಂಧಲೆ; ಬಸ್ ಕಂಡೆಕ್ಟರ್ ಮೇಲೆ ಹಲ್ಲೆ
ಬೆಂಗಳೂರು, ಎ.1: ರೌಡಿಗಳ ಗುಂಪೊಂದು ಕೆಎಸ್‌ಆರ್ ಟಿಸಿ ಬಸ್ ನಿರ್ವಾಹಕರೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿ ಮಚ್ಚು ಲಾಂಗ್ ತೋರಿಸಿ ದಾಂಧಲೆ ನಡೆಸಿದ ಘಟನೆ ಇಂದು ಬೆಳಗ್ಗೆ ನಗರದ ಬನಶಂಕರಿ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಶಿವಕುಮಾರ್ (40) ಎಂಬವರು ರೌಡಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳ್ಳಂಬೆಳಗ್ಗೆ 5:30ರ ಹೊತ್ತಿಗೆ ಇಟಿಯೋಸ್ ಕಾರ್ ನಲ್ಲಿ ಬಂದ ರೌಡಿಗಳ ತಂಡ ಬಸ್ ಕಂಡೆಕ್ಟರ್ ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಚಾಲಕನನ್ನು ರೌಡಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಮಧ್ಯೆ ಚಾಲಕನ ನೆರವಿಗೆ ಬಂದ ಕಂಡೆಕ್ಟರ್ ಶಿವಕುಮಾರ್ ತಲೆಗೆ ರೌಡಿಗಳು ಡ್ರಾಗರ್ ನಿಂದ ಹಲ್ಲೆ ನಡೆಸಿದರು ಎಂದು ತಿಳಿದು ಬಂದಿದೆ.
ಬಸ್ ಕಂಡೆಕ್ಟರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ರೌಡಿಗಳ ಪೈಕಿ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಕೈಗೆ ಒಪ್ಪಿಸಿದ್ದಾರೆ. ಗಾಯಗೊಂಡ ಬಸ್ ಕಂಡೆಕ್ಟರ್ ಜಯನಗರ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.