×
Ad

ಗೃಹ ಸಚಿವರ ಕಾರನ್ನು ತಡೆದು ತಪಾಸಣೆ ನಡೆಸಿದ ಪೊಲೀಸರು!

Update: 2017-04-01 11:43 IST

ಮೈಸೂರು, ಎ.1: ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಕಾರನ್ನೇ ಪೊಲೀಸರು ಪರಿಶೀಲಿಸಿದ ಘಟನೆ ನಂಜನಗೂಡಿನಲ್ಲಿಂದು ಬೆಳಗ್ಗೆ ನಡೆಯಿತು.

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರವಾಗಿ ಪ್ರಚಾರದ ಕಣಕ್ಕೆ ಧುಮುಕಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಕಾರನ್ನು ನಂಜನಗೂಡು ಚೆಕ್ ಪೋಸ್ಟ್ ಬಳಿ ತಡೆದ ಪೊಲೀಸರು ಅದನ್ನು ತಪಾಸಣೆಗೆ ಒಳಪಡಿಸಿದ್ದಾರೆ.
ಇಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ನಂಜನಗೂಡು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲು ಅವರು ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ಕಾರಿನಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಸಾಮಗ್ರಿಗಳಿವೆಯೇ ಎಂದು ಪೊಲೀಸರು ವಿವರವಾಗಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಾರನ್ನು ಪರಿಶೀಲಿಸಲು ಗೃಹ ಸಚಿವ ಪರಮೇಶ್ವರ್ ಸಹಕರಿಸಿದ್ದಲ್ಲದೆ, ಪೊಲೀಸರ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದರು.

ಅಂದ ಹಾಗೆ ಪೊಲೀಸರು ನಡೆಸಿದ ಪರಿಶೀಲನೆಯ ಸಂದರ್ಭದಲ್ಲಿ ಗೃಹ ಸಚಿವರಿದ್ದ ಕಾರಿನಲ್ಲಿ ಆಕ್ಷೇಪಾರ್ಹ ವಸ್ತುಗಳೇನೂ ಸಿಗಲಿಲ್ಲ.

ಈ ಸಂದರ್ಭದಲ್ಲಿ ಗೃಹಸಚಿವರ ಜತೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಮುದ್ದ ಹನುಮೇಗೌಡ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News