×
Ad

ಚಿಕ್ಕಮಗಳೂರು: ಮೂವರು ಅರಣ್ಯಾಧಿಕಾರಿಗಳ ಅಮಾನತು

Update: 2017-04-01 23:07 IST

ಚಿಕ್ಕಮಗಳೂರು, ಎ.1: ಡಿಎಫ್‌ಒ ಅವರಿಗೆ ಬೆದರಿಕೆ ಹಾಕಿ ಬ್ಲಾಕ್‌ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳನ್ನು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ.
ಮತ್ತೋಡಿ ವಲಯದ ಉಪವಲಯ ಅರಣ್ಯಾಧಿಕಾರಿ ಎಂ.ಪಿ. ಸಂತೋಷ್ ಕುಮಾರ್, ಸೈಯದ್ ಖದೀರ್, ಚಿಕ್ಕಮಗಳೂರು ವಲಯದ ಅರಣ್ಯ ರಕ್ಷಕ ಯು.ಕೆ.ಪ್ರದೀಪ್ ಅಮಾನತುಗೊಂಡಿರುವ ಅಧಿಕಾರಿಗಳು.


ಘಟನೆಯ ವಿವರ: ಡಿ.ಎಫ್.ಒ ಚಂದ್ರಣ್ಣ, ನೌಕರರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾ. 6 ಮತ್ತು 7ರಂದು ಡಿ.ಎಫ್. ಒ ಕಚೇರಿ ಮುಂಭಾಗ ಎರಡು ದಿನಗಳ ಕಾಲ ನೌಕರರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು. ಅಮಾನತ್ತು ಗೊಂಡಿರುವ ಮೂವರು ಅಧಿಕಾರಿಗಳ ಕುಮ್ಮಕ್ಕಿನಿಂದಾಗಿ ನೌಕರರು ಪ್ರತಿಭಟನೆ ನಡೆಸಿದ್ದಾರೆ ಎಂದು ಚಂದ್ರಣ್ಣ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಮೂವರು ಡಿಎಫ್‌ಒ ಚಂದ್ರಣ್ಣ ಅವರಿಗೆ ಕರೆ ಮಾಡಿ ಬೆದರಿಕೆಯೊಡ್ಡಿ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಈ ಸಂಬಂಧ ಮೂವರು ಅಧಿಕಾರಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲು ಮೇಲಧಿಕಾರಿಗೆ ಪತ್ರದ ಮೂಲಕ ಅನುಮತಿ ಕೋರಿದ್ದರು ಎಂದು ತಿಳಿದು ಬಂದಿದೆ.


 ಸೇವೆಯಲ್ಲಿರುವ ವೇಳೆ ಅಧಿಕಾರಿಗಳು ಸಮವಸ್ತ್ರದ ಮೇಲಂಗಿಯನ್ನು ಕಳಚಿ ಶಿಷ್ಟಾಚಾರದ ಮಿತಿಯನ್ನು ಮೀರಿ ವರ್ತಿಸುತ್ತಿದ್ದರು ಹಾಗೂ ಮೇಲಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಅಕ್ರಮವಾಗಿ ಬೀಗ ಹಾಕಿರುವುದು ಸೇರಿದಂತೆ ಇಲಾಖೆಯ ಅಧಿಕಾರಿಗಳ ಮಾತು ಧಿಕ್ಕರಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಅಮಾನತಿನ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News