ನೀರಿಲ್ಲದೆ ಬಣಗುಡುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಅನುಷ್ಠಾನಗೊಳ್ಳದ ಸರ್ವಋತು ಯೋಜನೆ
ಶಿವಮೊಗ್ಗ, ಎ. 1: ಮಳೆಗಾಲದಲ್ಲಿ ನೀರಿನಿಂದ ಧುಮ್ಮಿಕ್ಕುತ್ತಾ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುವ ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಪ್ರಸ್ತುತ ನೀರಿಲ್ಲದೆ, ಅಕ್ಷರಶಃ ಕಲ್ಲು ಬಂಡೆಗಳು ಗೋಚರವಾಗುತ್ತಿವೆ! ಇದರಿಂದ ಪ್ರವಾಸಿಗರು ನಿರಾಸೆಯಿಂದ ಹಿಂದಿರುಗುವಂತಾಗಿದೆ. ಬಿಸಿಲಿನ ಬೇಗೆಗೆ ‘ರಾಜ’, ‘ರಾಣಿ’ ಜಲಪಾತ ಸಂಪೂರ್ಣ ಬತ್ತಿ ಹೋಗಿವೆ.
‘ರೋರರ್’ ತನ್ನ ಆರ್ಭಟ ನಿಲ್ಲಸಿದೆ. ‘ರಾಕೆಟ್’ ಜಲಪಾತದಲ್ಲಿ ಮಾತ್ರ ಪ್ರಸ್ತುತ ಸಣ್ಣ ಪ್ರಮಾಣದ ನೀರು ಧುಮ್ಮಿಕ್ಕುತ್ತಿರುವುದು ಕಂಡುಬರುತ್ತಿದೆ. ಮಳೆಗಾಲದಲ್ಲಿ ಜಲಪಾತದ ರುದ್ರರಮಣೀಯ ವೈಭೋಗ ಕಣ್ತುಂಬಿಕೊಂಡವರು ಅದೇ ನಿರೀಕ್ಷೆಯಲ್ಲಿ ಪ್ರಸ್ತುತ ಜೋಗಕ್ಕೆ ತೆರಳಿದರೆ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿದೆ. ಆ ಮಟ್ಟಕ್ಕೆ ಜಲಪಾತ ನೀರಿಲ್ಲದೆ ಸೊರಗಿ ಹೋಗಿದೆ. ಜಲಪಾತದ ಸುತ್ತಮುತ್ತ ಕಂಡುಬರುತ್ತಿದ್ದ ಹಸಿರ ಹೊದಿಕೆಯೂ ಇದೀಗ ಇಲ್ಲವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮಳೆಗಾಲದ ನಾಲ್ಕೈದು ತಿಂಗಳು ಸೇರಿದಂತೆ ಡಿಸೆಂಬರ್‌ವರೆಗೂ ಜೋಗಕ್ಕೆ ದೇಶ-ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರಸ್ತುತ ಜೋಗಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಸಂಪೂರ್ಣವಾಗಿ ಕ್ಷೀಣಿಸಿದ್ದು, ಬೆರಳೆಣಿಕೆಯ ಪ್ರವಾಸಿಗರು ಬರುತ್ತಿದ್ದಾರೆ. ಅವರೂ ಕಳೆಗುಂದಿದ ಜಲಪಾತ ನೋಡಿ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.
ವ್ಯವಹಾರಕ್ಕೆ ಧಕ್ಕೆ: ಜೋಗ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರನ್ನೇ ನಂಬಿ ವ್ಯಾಪಾರ-ವಹಿವಾಟು ನಡೆಸುವವರ ಪಾಡಂತೂ ಹೇಳತೀರದಾಗಿದೆ. ಹೊಟೇಲ್, ಲಾಡ್ಜ್, ಹೋಂ ಸ್ಟೇಗಳು ಬಣಗುಡುತ್ತಿವೆ. ವರ್ತಕರು ವ್ಯಾಪಾರವಿಲ್ಲದೆ ತೀವ್ರ ನಷ್ಟ ಅನುಭವಿಸುವಂತಾಗಿದೆ. ‘ಕಳೆದ ಕೆಲ ತಿಂಗಳುಗಳಿಂದ ಜೋಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕುಸಿದಿದೆ. ಇದರಿಂದ ಹೊಟೇಲ್, ಲಾಡ್ಜ್, ಹೋಂ ಸ್ಟೇಗಳ ನಿರ್ವಹಣೆ ಮಾಡುವುದೇ ಕಷ್ಟಕರವಾಗಿ ಪರಿಣಮಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೆಲ ದಿನಗಳವರೆಗೆ ವ್ಯವಹಾರ ಮುಚ್ಚುವುದು ಅನಿವಾರ್ಯವಾಗಲಿದೆ ಎಂದು ಸ್ಥಳೀಯ ಹೊಟೇಲ್‌ನ ಮಾಲಕರೊಬ್ಬರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಸರ್ವಋತು ಏನಾಯ್ತು?: ಜೋಗ ಜಲಪಾತವನ್ನು ಸರ್ವಋತು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಂಡಿತ್ತು. ಬೇಸಿಗೆಯ ಅವಧಿಯಲ್ಲಿಯೂ ಮಳೆಗಾಲದ ರೀತಿಯಲ್ಲಿ ಜಲಪಾತದಲ್ಲಿ ನೀರು ಧುಮ್ಮಿಕ್ಕುವಂತೆ ಮಾಡುವುದು ಹಾಗೂ ಜೋಗ ಜಲಪಾತದ ಸುತ್ತಮುತ್ತ ನಾನಾ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ
ುೂಲಕ ಪ್ರವಾಸಿ ಗರನ್ನು ಸೆಳೆಯುವ ಯೋಜನೆ ಹಾಕಿಕೊಂಡಿತ್ತು. ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನ ಮಾಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಜಾಗತಿಕ ಟೆಂಡರ್ ಕೂಡ ಆಹ್ವಾನಿಸಿತ್ತು.
ಕಳೆದ ವರ್ಷ ಖಾಸಗಿ ವ್ಯಕ್ತಿಯೋರ್ವರಿಗೆ ಯೋಜನೆ ಅನುಷ್ಠಾನದ ಜವಾಬ್ದಾರಿ ಹಸ್ತಾಂತರಿಸಲು ಸರಕಾರ ಅನುಮತಿ ಕೂಡ ನೀಡಿತ್ತು. ಆದರೆ, ಪ್ರಸ್ತುತ ಈ ಯೋಜನೆ ಯಾವಾಗ ಅನುಷ್ಠಾನಗೊಳ್ಳಲಿದೆ? ಎಂಬುವುದಕ್ಕೆ ಯಾರ ಬಳಿಯೂ ಉತ್ತರ ಇಲ್ಲವಾಗಿದೆ. ಪ್ರಸ್ತುತ ಸ್ಥಿತಿಗತಿ ಗಮನಿಸಿದರೆ ಸದ್ಯಕ್ಕಂತೂ ಈ ಯೋಜನೆ ಅನುಷ್ಠಾನವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.