×
Ad

​ವ್ಯಕ್ತಿ ಕೊಲೆ: ಆರೋಪಿಗಳ ಬಂಧನ

Update: 2017-04-01 23:15 IST

ಶಿವಮೊಗ್ಗ, ಎ.1: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಸಫಲರಾಗಿದ್ದಾರೆ. ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ನಂಜುಂಡೇಗೌಡ ಹಾಗೂ ಅವರ ಸಂಬಂಧಿ ನಾಗೇಶ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರನ್ನು ಭದ್ರಾವತಿಯ ಬಾರಂದೂರು ಕ್ರಾಸ್ ಬಳಿ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಕಲ್ಲಹಳ್ಳಿ ಗ್ರಾಮದ ನಿವಾಸಿ ಬೋರೇಗೌಡ (70) ಎಂಬವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಸಂಬಂಧ ಅವರ ಪುತ್ರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಕ್ಷಿಪ್ರಗತಿಯ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರಣವೇನು?: ಕೊಲೆಗೀಡಾದ ಬೋರೇಗೌಡರವರು 2004ರಲ್ಲಿ ಆರೋಪಿ ನಂಜುಡೇಗೌಡರ ಪುತ್ರ ನಂದೀಶ್‌ಕುಮಾರ್ ಎಂಬ ಬಾಲಕನನ್ನು ಹತ್ಯೆ ಮಾಡಿದ್ದ. ಈ ಸಂಬಂಧ ಪೊಲೀಸರು ಬೋರೇಗೌಡರನ್ನು ಬಂಧಿಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಳೆದ ಆ.15ರಂದು ಸನ್ನಡತೆಯ ಆಧಾರದ ಮೇಲೆ ಬೋರೇಗೌಡನನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದ್ದು, ತುರುವೇಕೆರೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಕಲ್ಲಹಳ್ಳಿ ಗ್ರಾಮಕ್ಕೆ ಅವರು ಆಗಮಿಸಿದ್ದು, ಇದರ ಮಾಹಿತಿ ಪಡೆದ ಆರೋಪಿಗಳು ಮಾ.24 ರಂದು ಬೈಕ್‌ನಲ್ಲಿ ಆಗಮಿಸುತ್ತಿದ್ದ ಬೋರೇಗೌಡರನ್ನು ತಡೆದು ಹತ್ಯೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News