×
Ad

ಸಾಮಾಜಿಕ ತಾಣದಲ್ಲಿ ಚುನಾವಣೆ ಸದ್ದು: ಲಿಂಗಾಯಿತ ನಾಯಕ ಯಾರು? ಇದು ಚರ್ಚೆಯಾಗುತ್ತಿರುವ ಸುದ್ದಿ...

Update: 2017-04-02 19:16 IST

ಗುಂಡ್ಲುಪೇಟೆ ವಿಧಾನಸಭೆ ಚುನಾವಣೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದು ಮಾಡುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಟ್ವೀಟರ್ ಮತ್ತು ಫೇಸ್‌ಬುಕ್ ಬಳಕೆ ಮಾಡಿಕೊಂಡು ಆನ್ ಲೈನ್ ಪ್ರಚಾರದಲ್ಲಿಯೂ ಹಿಂದೆ ಬಿದ್ದಿಲ್ಲ.

ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಹೆಸರಿನಲ್ಲಿ ಫೇಸ್‌ಬುಕ್ ಖಾತೆಯೊಂದನ್ನು ತೆರೆಯಲಾಗಿದ್ದು, ಪ್ರತಿದಿನದ ಮತಪ್ರಚಾರದ ಅಪ್ ಡೇಡ್ ಮಾಡಲಾಗುತ್ತಿದೆ. ಪಾದಯಾತ್ರೆ ಫೋಟೋಗಳು, ರೋಡ್ ಶೋ ಫೋಟೋಗಳು, ಯಾವ ಯಾವ ಗ್ರಾಮಕ್ಕೆ ನಾಯಕರ ಭೇಟಿ, ಎಷ್ಟು ಸಂಖ್ಯೆಯ ಜನ ಸೇರಿದ್ದರು? ಎಂಬ ಎಲ್ಲ ಮಾಹಿತಿಯನ್ನು ಕ್ಷಣಕ್ಷಣಕ್ಕೆ ಅಪ್‌ಡೇಟ್ ಮಾಡಲಾಗುತ್ತಿರುತ್ತದೆ.

ನಿರಂಜನ್ ಕುಮಾರ್ ಹೆಸರಿನ ಖಾತೆಯನ್ನು ಸಾವಿರಾರು ಜನ ಲೈಕ್ ಮಾಡಿದ್ದು ಪ್ರತಿದಿನದ ಅಪ್ ಡೇಟ್ ಪಡೆದುಕೊಳ್ಳುತ್ತಿದ್ದಾರೆ. ಇದಲ್ಲದೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಅರವಿಂದ್ ಲಿಂಬಾವಳಿ ಸಹ ಟ್ವಿಟರ್‌ನಲ್ಲಿ ಚುನಾವಣಾ ಪ್ರಚಾರ ಸಭೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ಸಿಗರೇನು ಕಡಿಮೆಯಿಲ್ಲ:

ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸುದ್ದಿಗೋಷ್ಠಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೇ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಕ್ರಿಯಾಶೀಲರಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಕಣ್ಣಿರು ಹಾಕಿದ್ದು ಸಾಮಾಜಿಕ ತಾಣದಲ್ಲಿ ಭರ್ಜರಿ ಚರ್ಚೆಗೆ ಕಾರಣವಾಗಿತ್ತು. ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕಾಂಗ್ರೆಸ್ ನಾಯಕರ ಮಾತಿನ ಮೇರೆಗೆ ಗೀತಾ ಕಣ್ಣಿರು ಹಾಕಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ನಂತರ ಸ್ವತಃ ಗೀತಾ ಅವರೇ ಈ ವಿಚಾರ ಕೆದಕಬೇಡಿ ಎಂದು ಹೇಳಿ ವಿವಾದಕ್ಕೆ ಇತಿಶ್ರೀ ಹಾಡಿದ್ದರು.

ಲಿಂಗಾಯಿತ ನಾಯಕ ಯಾರು?

ಗುಂಡ್ಲುಪೇಟೆ ಚುನಾವಣೆ ಸಂಬಂಧ ಲಿಂಗಾಯಿತ ನಾಯಕ ಯಾರು ಎಂಬ ವಿಚಾರದ ಮೇಲೆಯೂ ಸಮಗ್ರ ಚರ್ಚೆ ಸಾಮಾಜಿಕ ತಾಣದಲ್ಲಿ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರನ್ನು ಹೋಲಿಕೆ ಮಾಡಲಾಗಿದೆ. ಬಿಎಸ್‌ವೈಗೆ ಜೈಕಾರ ಹಾಕಿರುವ ಜಾಲತಾಣಿಗರು ಶಾಮನೂರು ಲಿಂಗಾಯಿತ ಸಮುದಾಯಕ್ಕೆ ನೀಡಿದ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ.

ಹಾಡುಗಳ ಮೂಲಕ ಪ್ರಚಾರ: 

ಸಿನಿಮಾ ಮತ್ತು ಜಾನಪದದ ಜನಪ್ರಿಯ ಗೀತೆಗಳನ್ನು ಬಳಸಿಕೊಂಡಿರುವ ಕಾಂಗ್ರೆಸ್ ಅದಕ್ಕೆ ತಕ್ಕ ದಾಟಿಯಲ್ಲಿ ಹಾಡುಗಳನ್ನು ಸಿದ್ಧಮಾಡಿ ಚುನಾವಣಾ ಪ್ರಚಾರದ ವೇಳೆ ಬಳಕೆ ಮಾಡಿಕೊಳ್ಳುತ್ತಿದೆ. ಸಿದ್ದರಾಮಯ್ಯ, ಮಹದೇವ ಪ್ರಸಾದ್‌ದರನ್ನು ಹೊಗಳುವ, ಗೀತಾ ಪರ ಮತಯಾಚಿಸಿವ, ಬಿಜೆಪಿ ಸರಕಾರವನ್ನು, ಬಿಜೆಪಿ ಅವಧಿಯಲ್ಲಿ ವಿಧಾನಸಭೆ ಕಲಾಪದಲ್ಲಾದ ಪ್ರಮಾದಗಳನ್ನು ಟೀಕಿಸುವ ಹಾಡುಗಳು ಇವೆ.

ಅಭಿಮಾನಿ ಪೇಜ್‌ಗಳು: 

ಫೇಸ್ ಬುಕ್‌ನಲ್ಲಿ ಈ ಮೊದಲಿದ್ದ ಮತ್ತು ಚುನಾವಣೆ ಸಂದರ್ಭ ಹುಟ್ಟಿಕೊಂಡಿರುವ ಯಡಿಯೂರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ಅಭಿಮಾನಿ ಪೇಜ್‌ಗಳು ಸಹ ಕಾರ್ಯನಿರತವಾಗಿವೆ. ಟ್ರೋಲ್‌ಗಳು, ಪತ್ರಿಕೆಯ ವರದಿಗಳು, ಟಿವಿ ಕ್ಲಿಪಿಂಗ್‌ಗಳು ಮತ್ತು ಜನರ ಅಭಿಪ್ರಾಯಗಳನ್ನು ಇಟ್ಟುಕೊಂಡು ಪುನಃ ಪುನಃ ಪೋಸ್ಟ್ ಮಾಡಲಾಗುತ್ತಿದೆ. ಇಲ್ಲಿ ಅವರಿಗೆ ಬೇಕಾದ ಪರ ಮತ್ತು ವಿರೋಧದ ಸಂಗತಿಗಳನ್ನು ಕಾರ್ಯಕರ್ತರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

Writer - ಮಹದೇವ್‌ಪ್ರಸಾದ್ ಹಂಗಳ

contributor

Editor - ಮಹದೇವ್‌ಪ್ರಸಾದ್ ಹಂಗಳ

contributor

Similar News