ದುಡಿಯುವ ಎತ್ತಿಗೆ ಹುಲ್ಲು ಕೊಡುವಂತೆ ಜನಸೇವೆ ಮಾಡುವ ಅಭ್ಯರ್ಥಿಗೆ ಮತ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ನಂಜನಗೂಡು, ಎ.2: ದುಡಿಯುವ ಎತ್ತಿಗೆ ಹುಲ್ಲು ಕೊಡುವಂತೆ ಜನಸೇವೆ ಮಾಡುವ ಅಭ್ಯರ್ಥಿಗೆ ಮತ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರು.
ನಂಜನಗೂಡು ವಿಧಾನಸಭೆ ಕ್ಷೇತ್ರದಲ್ಲಿ ರವಿವಾರ ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಯವರು, ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರ ಮತ ಯಾಚಿಸಿದರು. ಮುಖ್ಯಮಂತ್ರಿಗಳು ಇಂದು 15ಕ್ಕೂ ಹೆಚ್ವು ಹಳ್ಳಿಗಳಲ್ಲಿ ರೋಡ್ ಶೋ ನಡೆಸಿದರು. ಕೆಲ ಗ್ರಾಮದಳಲ್ಲಿ ಪಾದಯಾತ್ರೆ ಮೂಲಕವೂ ಪ್ರಚಾರ ಕೈಗೊಂಡರು.
ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಗಳು ಹೇಳಿದರು.
ಈ ಹಿಂದೆ ನಂಜನಗೂಡು ಕ್ಷೇತ್ರದ ಅಭಿವೃದ್ಧಿಗೆ ಶಾಸಕರಾಗಿದ್ದವರು ಯಾವುದೇ ಪ್ರಯತ್ನ ಮಾಡಲಿಲ್ಲ. ಕ್ಷೇತ್ರದಲ್ಲಿ ಈಗ 600 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯೂ ಪ್ರಗತಿಯಲ್ಲಿದೆ. 48 ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲ ಜಾತಿಯ ಬಡವರ ಪರವಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಮ್ಮದು ಜನಪರ ಸರ್ಕಾರ. ಅದನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಿ ಎಂದರು.
ನಾವು ಸುಮ್ಮನೆ ಮತ ಕೇಳುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಅದನ್ನು ನೋಡಿ ಮತ ನೀಡಿ. ಈ ಹಿಂದೆ ಶಾಸಕರಾಗಿದ್ದವರು ಸ್ವಪ್ರತಿಷ್ಠೆಯಿಂದ ರಾಜೀನಾಮೆ ಕೊಡದೇ ಹೋಗಿದ್ದರೆ ಈ ಉಪ ಚುನಾವಣೆ ಬರುತ್ತಿರಲಿಲ್ಲ. ಜೊತೆಗೆ ಬರಗಾಲದಲ್ಲಿ ಚುನಾವಣೆ ಬೇಡವಾಗಿತ್ತು. ನಂಜನಗೂಡು, ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಒಳ್ಳೆಯ ಅಭ್ಯರ್ಥಿ ಗಳನ್ನೇ ಕಣಕ್ಕಿಳಿಸಿದ್ದೇವೆ. ಅವರು ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ. ಇಂತಹ ಅಭ್ಯರ್ಥಿ ಗಳು ಚುನಾಯಿತರಾದರೆ ಲೋಕಸಭೆ, ವಿಧಾನಸಭೆಯ ಘನತೆ ಹೆಚ್ಚಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಆರ್ಥಿಕ, ಸಾಮಾಜಿಕ ದೇಶದಲ್ಲಿ ತರಲು ಪಕ್ಷ ಶ್ರಮಿಸುತ್ತಿದೆ. ಅದಕ್ಕಾಗಿಯೇ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಮೈತ್ರಿ, ಕ್ಷೀರಧಾರೆ ಮತ್ತಿತರ ಕಾರ್ಯಕ್ರಮಗಳನ್ನು ನಮ್ಮ ಸರಕಾರ ಜಾರಿಗೆ ತಂದಿದೆ. ಸಮಾಜದಲ್ಲಿ ಯಾರೂ ಹಸಿವಿನಿಂದ ಮಲಗಬಾರದು. ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕು ಎಂಬುದು ನಮ್ಮ ಗುರಿ ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು, ಅಂಗನವಾಡಿ ಮಕ್ಕಳಿಗೆ ಮೊಟ್ಟೆ, 12 ಲಕ್ಷ ಗರ್ಭಿಣಿಯರು, ಬಾಣಂತಿಯರಿಗೆ ಬಿಸಿಯೂಟ ನೀಡುವ ಕಾರ್ಯಕ್ರಮವನ್ನು ಹಿಂದಿನ ಸರ್ಕಾರಗಳು ಜಾರಿಗೆ ತಂದಿರಲಿಲ್ಲ. ಆ ಕೆಲಸ ನಾವು ಮಾಡಿದ್ದೇವೆ ಎಂದು ಮತ ಯಾಚಿಸಿದರು.
ನಾವು ಜಾತಿ ಆಧಾರದ ಮೇಲೆ ಕೆಲಸ ಮಾಡುವುದಿಲ್ಲ. ಎಲ್ಲ ವರ್ಗದ ಬಡವರಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ನಿಲುವು. ಡಾ. ಬಿ.ಆರ್.ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿಯವರು ಹಾಕಿಕೊಟ್ಟಿರುವ ಮಾರ್ಗ ದಲ್ಲಿ ನಡೆಯುತ್ತಿರುವ ಸರಕಾರ ನಮ್ಮದು. ಇಲ್ಲಿಗೆ ಬಂದು ಮತ ಕೇಳಲು ಬಿಜೆಪಿಯವರಿಗೆ ಯಾವ ನೈತಿಕ ಹಕ್ಕು ಇದೆ ಎಂದು ಪ್ರಶ್ನಿಸಿದರು.