ನಾಲ್ಕನೆ ದಿನಕ್ಕೆ ಕಾಲಿಟ್ಟ ಲಾರಿ ಮಾಲಕರ ಮುಷ್ಕರ : ಅಡುಗೆ ಅನಿಲ,ಇಂಧನ ಪೂರೈಕೆಯಲ್ಲಿ ವ್ಯತ್ಯಯ

Update: 2017-04-02 16:37 GMT

ಬೆಂಗಳೂರು, ಎ. 2: ವಿಮೆ ಮೊತ್ತ ಏರಿಕೆ ರದ್ದುಗೊಳಿಸಿ, ಥರ್ಡ್ ಪಾರ್ಟಿ ಪ್ರೀಮಿಯಂ ದರ ಏರಿಕೆ ವಾಪಸ್ಸು ಹಾಗೂ ಟೋಲ್ ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ದಕ್ಷಿಣ ಭಾರತದ ಲಾರಿ ಮಾಲಕರು ನಡೆಸುತ್ತಿರುವ ಮುಷ್ಕರ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.

ಮಧ್ಯರಾತ್ರಿಯಿಂದಲೇ ಅಡುಗೆ ಅನಿಲ ಮತ್ತು ಡಿಸೇಲ್-ಪೆಟ್ರೋಲ್ ಪೂರೈಕೆ ಟ್ಯಾಂಕರ್ ಲಾರಿಗಳು ಸ್ಥಗಿತಗೊಳಿಸುವ ಮೂಲಕ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು ಲಾರಿ ಮಾಲಕರ ಸಂಘ ನಿರ್ಧರಿಸಿದೆ. ಮೂರು ದಿನಗಳಿಂದ ಲಾರಿ ಮಾಲಕರು ಮುಷ್ಕರ ನಡೆಸುತ್ತಿದ್ದರೂ, ಸರಕಾರ ಯಾವುದೆ ಕ್ರಮ ಕೈಗೊಂಡಿಲ್ಲ.

ಲಾರಿ ಮಾಲಕರ ಮುಷ್ಕರದಿಂದಾಗಿ ವಾಣಿಜ್ಯ ವಾಹನಗಳ ಸಂಚಾರವಿಲ್ಲದೆ, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಭಾರಿ ಪ್ರಮಾಣದ ವ್ಯತ್ಯಯ ಉಂಟಾಗಿದ್ದು, ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಅಗತ್ಯ ವಸ್ತುಗಳಿಲ್ಲದೆ ಪರದಾಡುತ್ತಿರುವ ವೇಳೆಯಲ್ಲಿಯೇ ಗ್ಯಾಸ್ ಮತ್ತು ಪೆಟ್ರೋಲ್ ವಾಹನಗಳ ಮಾಲಕರ ಸಂಘಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.

ಹೀಗಾಗಿ ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ದಕ್ಷಿಣ ರಾಜ್ಯಗಳ ವಾಣಿಜ್ಯ ವಾಹನಗಳ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಷಣ್ಮುಗಪ್ಪ ವಾರ್ತಾಭಾರತಿಗೆ ತಿಳಿಸಿದ್ದಾರೆ.

ದಕ್ಷಿಣ ಭಾರತದಾದ್ಯಂತ 90 ಲಕ್ಷಕ್ಕೂ ಅಧಿಕ ಲಾರಿಗಳು ಹಾಗೂ ರಾಜ್ಯದಲ್ಲಿ 9ಲಕ್ಷ ಲಾರಿಗಳು ಮುಷ್ಕರದಲ್ಲಿ ಭಾಗವಹಿಸಿವೆ. ರಾಜ್ಯದ ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ಮಂಗಳೂರು, ಬಿಜಾಪುರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಯಾವುದೇ ಜಿಲ್ಲೆಯಲ್ಲಿ ಲಾರಿಗಳು ರಸ್ತೆಗೆ ಇಳಿದಿಲ್ಲ. ಇದರಿಂದ ಸರಕು ಸಾಗಣೆ ಮೇಲೆ ಭಾರಿ ಪರಿಣಾಮ ಬೀರಿದೆ.

ಬೆಂಗಳೂರಿನ ಆಡುಗೋಡಿಯ ಗೂಡ್ಸ್ ಶೆಡ್ ಕಂಟೇನರ್‌ನಲ್ಲಿ 3 ಸಾವಿರಕ್ಕೂ ಅಧಿಕ ಲಾರಿಗಳು ಮುಷ್ಕರದಲ್ಲಿ ಭಾಗಿಯಾಗಿದ್ದು, ಈ ಪ್ರದೇಶದಲ್ಲಿ ಪ್ರತಿದಿನ 10 ಸಾವಿರ ಟನ್ ಸರಕು ಸಾಗಣೆ ನಿಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News