ತಡವಾಗಿ ಬೆಳಕಿಗೆ ಬಂದ ಪ್ರಕರಣ: ಮಂಗಳೂರು ಜೈಲಿನಿಂದ ತಪ್ಪಿಸಲೆತ್ನಿಸಿದ ಕೈದಿ ಸೆರೆ
ಮಂಗಳೂರು, ಎ.2: ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕೈದಿಯೊಬ್ಬನನ್ನು ಗೃಹರಕ್ಷಕ ದಳದ ಸಿಬ್ಬಂದಿ ಸೆರೆ ಹಿಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುರುವಾರ ತಡರಾತ್ರಿ ವಿಚಾರಣಾಧೀನ ಕೈದಿಯೊಬ್ಬ ಜೈಲ್‌ನ ಕೊಠಡಿಯಿಂದ ತಪ್ಪಿಸಿಕೊಂಡು ಜೈಲಿನ ಮುಖ್ಯಗೇಟ್‌ವರೆಗೆ ಬಂದಿದ್ದ ಎನ್ನಲಾಗಿದೆ. ಅಷ್ಟರಲ್ಲಿ ಕರ್ತವ್ಯ ನಿರತ ಗೃಹರಕ್ಷಕ ದಳದ ಸಿಬ್ಬಂದಿಯ ಕಣ್ಣಿಗೆ ಕೈದಿ ಬಿದ್ದ. ತಕ್ಷಣ ಸೆರೆ ಹಿಡಿದ ಗೃಹರಕ್ಷಕ ದಳದ ಸಿಬ್ಬಂದಿ ಬಳಿಕ ಜೈಲ್‌ನ ಸಿಬ್ಬಂದಿಯ ವಶಕ್ಕೆ ನೀಡಿದ್ದಾರೆ. ಈ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಲಾಗಿದೆ.
ದ.ಕ.ಜಿಲ್ಲಾ ಕಾರಾಗೃಹವು ಕಳೆದ ಹಲವು ವರ್ಷದಿಂದ ಕೆಲವೊಂದು ಘಟನೆಯ ಹಿನ್ನಲೆಯಲ್ಲಿ ಗಮನ ಸೆಳೆಯುತ್ತಲೇ ಇದೆ. ಈ ಹಿಂದೆ ಇಬ್ಬರು ವಿಚಾರಣಾಧೀನ ಕೈದಿಗಳ ಕೊಲೆ, ಕೈದಿಗಳ ಮಧ್ಯೆ ಹೊಡೆದಾಟವಲ್ಲದೆ, ಅಕ್ರಮ ಆಯುಧ, ಗಾಂಜಾ, ಮೊಬೈಲ್ ಇತ್ಯಾದಿಯ ವಶವೂ ಆಗಿತ್ತು. ಇತ್ತೀಚೆಗೆ ವಿಚಾರಣಾಧೀನ ಕೈದಿಯೊಬ್ಬ ಜೈಲ್‌ನಿಂದ ತಪ್ಪಿಸಿಕೊಂಡು ಬಳಿಕ ಸುಳ್ಯದಲ್ಲಿ ಸೆರೆ ಸಿಕ್ಕಿದ್ದ. ಆ ಹಿನ್ನಲೆಯಲ್ಲಿ ತನಿಖೆ ನಡೆದು ಅಮಾನತು ಪ್ರಕ್ರಿಯೆಯೂ ನಡೆದಿತ್ತು. ಹೀಗೆ ಜಿಲ್ಲಾ ಕಾರಾಗೃಹವು ಬೇರೆ ಬೇರೆ ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ.
ಇದೀಗ ಕಳೆದ ಗುರುವಾರ ಕೈದಿಯೊಬ್ಬ ಜೈಲ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಸಿಕ್ಕಿ ಬಿದ್ದರೂ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿರುವುದು ಅನೇಕ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಜೈಲ್‌ನ ಸಿಬ್ಬಂದಿ ವರ್ಗದ ನಿರ್ಲಕ್ಷವೇ ಈ ಎಲ್ಲ ಎಡವಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆ.