ಶಿರಾಳಕೊಪ್ಪದ ಬಳಿ ಚಿರತೆ ಸಾವು
Update: 2017-04-02 23:01 IST
ಶಿವಮೊಗ್ಗ, ಎ.2: ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪಸಮೀಪದ ಹಿರೇಜಂಬೂರು ಸಮೀಪದ ಮಾವಿನ ತೋಟವೊಂದರ ಪಕ್ಕದ ಕಿರು ಅರಣ್ಯ ಪ್ರದೇಶದಲ್ಲಿ ಹೆಣ್ಣು ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಚಿರತೆಯು ಸುಮಾರು ಒಂದೂವರೆ ವರ್ಷ ಪ್ರಾಯದ್ದಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು.
ಯಾವುದೋ ಪ್ರಾಣಿ ಯೊಂದಿಗೆ ಕಾದಾಟದಲ್ಲಿ ಚಿರತೆ ಮೃತಪಟ್ಟಿ ರುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ಹೇಳಿವೆ. ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿ ಕೈ ಸೇರಿದ ನಂತರ ಚಿರತೆಯ ಸಾವಿಗೆ ಸ್ಪಷ್ಟ ಕಾರಣ ಏನೆಂಬುದು ಗೊತ್ತಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ವಿಧಿವಿಧಾನ ನಡೆಸಿದ ನಂತರ ವಿಧಿಬದ್ಧವಾಗಿ ಚಿರತೆಯ ಕಳೇಬರವನ್ನು ಅಕೇಶಿಯಾ ನೆಡುತೋಪಿನಲ್ಲಿ ಸುಟ್ಟು ಹಾಕಲಾಯಿತು.