×
Ad

ವೈದ್ಯಕೀಯ ಸೌಲಭ್ಯ ನಿವೃತ್ತ ಪೊಲೀಸರಿಗೂ ಅಗತ್ಯ: ಕೇಶವಾನಂದ

Update: 2017-04-02 23:04 IST

ಮಡಿಕೇರಿ, ಎ.2: ಕರ್ತವ್ಯನಿರತ ಪೊಲೀಸರಿಗೆ ಲಭ್ಯವಾಗುವ ವೈದ್ಯಕೀಯ ಸೌಲಭ್ಯಗಳು ನಿವೃತ್ತ ಪೊಲೀಸರಿಗೂ ಒದಗಿಸುವಂತಾಗಬೇಕು ಎಂದು ನಿವೃತ್ತ ಪೊಲೀಸ್ ಉಪ ಅಧೀಕ್ಷಕ ವೈ.ಡಿ. ಕೇಶವಾನಂದ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರವಿವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪಟ್ರೋಫಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.


 ಇತ್ತೀಚಿನ ದಿನಗಳಲ್ಲಿ ನಿವೃತ್ತ ಪೊಲೀಸರು ವೈದ್ಯಕೀಯ ವೆಚ್ಚ ಭರಿಸುವುದು ಕಷ್ಟಸಾಧ್ಯವಾಗಿದೆ. ವೃತ್ತಿಯಲ್ಲಿರುವ ಪೊಲೀಸರಿಗೆ ಇರುವ ವೈದ್ಯಕೀಯ ಸೌಲಭ್ಯವನ್ನು ನಿವೃತ್ತ ಪೊಲೀಸರಿಗೂ ಮುಂದುವರಿಸುವಂತಾಗಬೇಕು. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಿದೆ ಎಂದು ಅವರು ಸಲಹೆ ನೀಡಿದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಾಜದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪ್ರಕರಣ ಕಡಿಮೆ ಮಾಡುವುದು, ಸಂಚಾರ ದಟ್ಟಣೆ ನಿಯಂತ್ರಣ ಮಾಡುವುದು, ಗಣ್ಯರು ಆಗಮಿಸುವ ಸಂದರ್ಭದಲ್ಲಿ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡುವುದು ಹೀಗೆ ದಿನದ 24 ಗಂಟೆಯೂ ಕರ್ತವ್ಯದಲ್ಲಿ ತೊಡಗಿರುತ್ತಾರೆ. ಪೊಲೀಸರ ಸೇವೆ ಸ್ಮರಣೀಯ ಎಂದರು. ಏರ್ ಮಾರ್ಷಲ್(ನಿವೃತ್ತ) ಕೆ.ಸಿ. ಕಾರ್ಯಪ್ಪಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಟ್ರೋಫಿ ವಿತರಿಸಿ ಮಾತನಾಡಿ, ಪೊಲೀಸ್ ಸೇವೆಯು ಜವಾಬ್ದಾರಿಯುತ ಹಾಗೂ ಕರ್ತವ್ಯ ನಿಷ್ಠ, ಕಠಿಣ ಸೇವೆಯಾಗಿದೆ. ಪೊಲೀಸರು ಸಮಾಜದ ರಕ್ಷಣೆಯಲ್ಲಿ ಪ್ರಮುಖಪಾತ್ರ ವಹಿಸುತ್ತಾರೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಮಾತನಾಡಿ, ಪೊಲೀಸರು ಹಗಲು ರಾತ್ರಿ ಎನ್ನದೇ ಸಮಾಜದಲ್ಲಿ ಶಾಂತಿ ಕಾಪಾಡಲು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ.

ಈ ನಿಟ್ಟಿನಲ್ಲಿ ಪೊಲೀಸರ ಸೇವೆ ಸ್ಮರಣೀಯ, ಜೊತೆಗೆ ಪೊಲೀಸರು ಸಹ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದರು. ಅಬ್ದುಲ್ ಮಝೀದ್‌ಗೆ ಕಾರ್ಯಪ್ಪಟ್ರೋಫಿ
  ಗೋಣಿಕೊಪ್ಪ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ಮಝೀದ್ ಅವರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪಟ್ರೋಫಿ ವಿತರಿಸಲಾಯಿತು. ನಿವೃತ್ತ 12 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಆರ್‌ಪಿಐ ತಿಮ್ಮಪ್ಪಗೌಡ ಪಥಸಂಚಲನದ ನೇತೃತ್ವ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಅಪ್ಪಯ್ಯ, ಕರ್ನಲ್ ಕೆ.ಸಿ. ಸುಬ್ಬಯ್ಯ, ಉತ್ತಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಡಿಸಿಪಿ ಪೂಣಚ್ಚ, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News