×
Ad

ಜೆಡಿಎಸ್ ಬಂಡಾಯ ಶಾಸಕರ ಪ್ರಚಾರಕ್ಕೆ ಸಿಎಂ ತಡೆ

Update: 2017-04-03 19:04 IST

ಬೆಂಗಳೂರು, ಎ.3: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಿದ್ಧತೆ ಮಾಡಿಕೊಂಡಿದ್ದ ಜೆಡಿಎಸ್ ಬಂಡಾಯ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆಯೊಡ್ಡಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷಾಂತರ ನಿಷೇಧ ಕಾಯ್ದೆ ಸೇರಿದಂತೆ ಇನ್ನಿತರ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಬಹಿರಂಗ ಪ್ರಚಾರ ಮಾಡುವುದರ ಬದಲು ಪರೋಕ್ಷ ಬೆಂಬಲ ನೀಡುವಂತೆ ಶಾಸಕರಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಬಜೆಟ್ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಜೆಡಿಎಸ್ ಶಾಸಕರಾದ ಚಲುವರಾಯಸ್ವಾಮಿ, ಝಮೀರ್‌ಅಹ್ಮದ್‌ಖಾನ್, ಬಾಲಕೃಷ್ಣ, ಅಖಂಡ ಶ್ರೀನಿವಾಸ್‌ಮೂರ್ತಿ ಸೇರಿದಂತೆ ಇನ್ನಿತರರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ತಿಳಿಸಿದ್ದರು.

ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿಲ್ಲ. ಆದುದರಿಂದ, ನೀವು ಇತರೆ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಳ್ಳುವುದರಿಂದ ತಾಂತ್ರಿಕ ಸಮಸ್ಯೆಗಳು ಎದುರಾಗಬಹುದು. ಅಲ್ಲದೆ, ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳು ಇವೆ. ಆದುದರಿಂದ, ಈ ಚುನಾವಣೆಯಲ್ಲಿ ನೇರವಾಗಿ ಪ್ರಚಾರ ನಡೆಸುವುದು ಸೂಕ್ತವಲ್ಲ ಎಂದು ಮುಖ್ಯಮಂತ್ರಿ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

 ಎರಡು ಕ್ಷೇತ್ರಗಳಲ್ಲಿ ನಿಮ್ಮ ಸಂಪರ್ಕದಲ್ಲಿರುವ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಂಪರ್ಕಿಸಿ, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಜೆಡಿಎಸ್ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News