×
Ad

ಮ್ಯಾನ್‌ಹೋಲ್ ಮುಚ್ಚದವರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ: ಹೈಕೋರ್ಟ್ ಪ್ರಶ್ನೆ

Update: 2017-04-03 21:24 IST

ಬೆಂಗಳೂರು, ಎ.3: ನಗರದ ಹುಳಿಮಾವು ವ್ಯಾಪ್ತಿಯಲ್ಲಿ ಮ್ಯಾನ್‌ಹೋಲ್ ತೆಗೆದು ನಾಲ್ಕೈದು ವರ್ಷಗಳು ಕಳೆದರೂ ಮುಚ್ಚಲು ಸೂಚಿಸದ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಹಾಗೂ ವಿಳಂಬ ನೀತಿಗೆ ಏನು ಕಾರಣ ಎಂಬುದರ ಬಗ್ಗೆ ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.

ಈ ಸಂಬಂಧ ಎಸ್ಟೀಮ್ ಎನ್‌ಕ್ಲೇವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಎಸ್. ಚವ್ಹಾಣ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿದಾರರ ಮನೆಯ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಅಪಾರ್ಟ್‌ಮೆಂಟ್‌ನ್ನು ನಿರ್ಮಿಸುವಾಗ ಮ್ಯಾನ್‌ಹೋಲ್‌ನ್ನು ತೆಗೆದು ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ. ಹೀಗಾಗಿ, ಇದನ್ನು ಮುಚ್ಚಲು ಅಪಾರ್ಟ್‌ಮೆಂಟ್‌ನವರಿಗೆ ಆದೇಶಿಸಬೇಕೆಂದು ಬಿಬಿಎಂಪಿಗೆ ಅರ್ಜಿದಾರರು ಮನವಿ ಮಾಡಿದರೂ ನಾಲ್ಕೈದು ವರ್ಷಗಳಿಂದ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಹಾಗೂ ಮ್ಯಾನ್‌ಹೋಲ್ ಮುಚ್ಚಲು ವಿಳಂಬನೀತಿಗೆ ಏನು ಕಾರಣ ಎಂಬುದರ ಬಗ್ಗೆ ವರದಿ ಸಲ್ಲಿಸಬೇಕೆಂದು ನ್ಯಾಯಪೀಠವು ಬಿಬಿಎಂಪಿಗೆ ಆದೇಶಿಸಿತು.

ಮ್ಯಾನ್‌ಹೋಲ್‌ನ್ನು ತೆಗೆದು ಹಾಗೆಯೆ ಬಿಡುವುದರಿಂದ ಚಿಕ್ಕ ಮಕ್ಕಳು, ವೃದ್ಧರು ಹಾಗೂ ವಾಹನ ಸವಾರರು ಬೀಳುವ ಸಂಭವವಿರುತ್ತದೆ. ಅಲ್ಲದೆ, ಬೆಂಗಳೂರಿನಲ್ಲಿ 6 ಲಕ್ಷ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ನ್ಯಾಯಪೀಠವು ಅಭಿಪ್ರಾಯಿಸಿತು.

ಬಿಬಿಎಂಪಿಗೆ ಸಂಬಂಧಪಟ್ಟ ದೂರುಗಳ ಬಗ್ಗೆ ಒಂದು ಪಟ್ಟಿಯನ್ನು ಮಾಡಿಕೊಂಡು ಆ ಪಟ್ಟಿಯನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಿ ಹಾಗೂ ಆ ದೂರುಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಿ ಎಂದು ಕೋರ್ಟ್‌ನಲ್ಲಿ ಹಾಜರಿದ್ದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್‌ಗೆ ಸೂಚನೆ ನೀಡಿದರು.

ಅಪಾರ್ಟ್‌ಮೆಂಟ್ ಕಟ್ಟಿ ಮ್ಯಾನ್‌ಹೋಲ್ ತೆಗೆದು ಮುಚ್ಚದೆ ಹಾಗೆಯೇ ಬಿಟ್ಟಿರುವವರ ವಿರುದ್ಧ ಬರೀ ಎಫ್‌ಐಆರ್ ದಾಖಲಿಸಿ, ಚಾರ್ಜ್‌ಶೀಟ್ ಸಲ್ಲಿಸಿದರೆ ಸಾಲದು ಎಂದು ಅಭಿಪ್ರಾಯಿಸಿದ ನ್ಯಾಯಾಲಯವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆದೇಶಿಸಿ ವಿಚಾರಣೆಯನ್ನು ಎ.19ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News