5 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ಅನುಮೋದನೆ
ಕುಶಾಲನಗರ, ಎ.3: ಪಟ್ಟಣ ಪಂಚಾಯತ್ ಅಧ್ಯಕ್ಷ ಎಂ.ಎಂ. ಚರಣ್ ಅಧ್ಯಕ್ಷತೆಯಲ್ಲಿ ಸೋಮವಾರ ಮಧ್ಯಾಹ್ನ ವಿಶೇಷ ಸಭೆಯನ್ನು ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿತ್ತು.
ವಿಷಯ ಪ್ರಸ್ತಾಪಿಸಿದ ಅಧ್ಯಕ್ಷರು, ಕರ್ನಾಟಕ ಪುರಸಭಾ ಅಧಿನಿಯಮ 1964 ನಿಯಮ 86ರ ಪ್ರಕಾರ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಕೆನರಾ ಬ್ಯಾಂಕ್‌ನಿಂದ 5 ಕೋಟಿ ರೂ. ಸಾಲ ಸೌಲಭ್ಯವನ್ನು ಪಡೆಯಲು ಮುಂದಾಗಿದ್ದು, ಇದರ ಬಗ್ಗೆ ಆಡಳಿತ ಮಂಡಳಿ ಅನುಮೋದನೆ ಕೋರಿದರು.
ಈ ಸಂದರ್ಭ ಮಾತನಾಡಿದ ತಾಪಂ ಸದಸ್ಯ ಎಚ್.ಜೆ. ಕರಿಯಪ್ಪ, ಈಗಿನ ಪಟ್ಟಣ ಪಂಚಾಯತ್ ಕಟ್ಟಡ ನಿರ್ಮಾಣ ಮಾಡಿ 65 ವರ್ಷಗಳಾಗಿದ್ದು, ಪಟ್ಟಣದ ಜನಸಂಖ್ಯೆ ಹೆಚ್ಚುತ್ತಿದೆ. ಮುಂದೆ ಪುರಸಭೆಯಾಗುವ ಹಂತದಲ್ಲಿದೆ. ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಡಿ.12, 2016ರಲ್ಲೇ ಪಪಂ ಸದಸ್ಯರಿಂದ ಒಪ್ಪಿಗೆ ನೀಡಲಾಗಿದೆ. ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ಸಮ್ಮತಿಸಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಎಚ್.ಡಿ. ಚಂದ್ರು ಮಾತನಾಡಿ, ಸದ್ಯದ ಆಡಳಿತ ಕಚೆೇರಿ ಇಂದಿನ ಆಡಳಿತ ವ್ಯವಸ್ಥೆಗೆ ಕಿರಿದಾಗಿದೆ. ಆಡಳಿತ ಕಚೇರಿಯೊಂದಿಗೆ ವಿಶಾಲವಾದ ಸಭಾಂಗಣದ ಅಗತ್ಯವಿದೆ ಎನ್ನುವ ವಿಷಯ ಪ್ರಸ್ತಾಪಿಸಿದರು.
ಈ ಮಧ್ಯೆ ಮಾತನಾಡಿದ ನಾಮನಿರ್ದೇಶಕ ಸದಸ್ಯ ಫಝುಲುಲ್ಲಾ, ಪಂಚಾಯತ್‌ನ ವಾರ್ಷಿಕ ಆದಾಯ ಹಿಂದಿನ ಸಾಲಿಗೆ ಹೋಲಿಸಿದರೆ ಅಲ್ಪ ಪ್ರಮಾಣದ್ದಾಗಿದೆ.
5 ಕೋಟಿ ರೂ. ಸಾಲವನ್ನು ಯಾವ ಆಧಾರದ ಮೇಲೆ ಕೆನರಾ ಬ್ಯಾಂಕ್ ನೀಡುತ್ತಿದೆ ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀಧರ್, ಈಗಾಗಲೇ ಪಟ್ಟಣ ಪಂಚಾಯತ್‌ನ ವಾರ್ಷಿಕ ಆದಾಯ 1.50 ಕೋಟಿ ರೂ.ಗೆ ಏರಿಕೆಯಾಗಿದೆ. ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಮುಂದಾಗಿರುವ ಜಾಗ ಒಂದೂವರೆ ಎಕರೆಯಷ್ಟಿದ್ದು, ಯಾವುದೇ ಆತಂಕವಿಲ್ಲದೆ ಕಾಮಗಾರಿಗೆ ಮುಂದಾಗಬಹುದು ಎಂದರು. ಬಳಿಕ ಆಡಳಿತ ಮಂಡಳಿ ಅನುಮೋದನೆ ನೀಡಿತು.
ವಿಶೇಷ ಸಭೆಯಲ್ಲಿ ಉಪಾಧ್ಯಕ್ಷ ಶರವಣಕುಮಾರ್, ಸದಸ್ಯರಾದ ತಿಮ್ಮಪ್ಪ, ರಶ್ಮಿ, ಕವಿತಾ, ಪಾರ್ವತಿ, ಲಲಿತಾ ಮತ್ತಿತರರಿದ್ದರು.