×
Ad

ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ; ಕರ್ನಾಟಕ ಉತ್ತರ ಪ್ರದೇಶ ಅಲ್ಲ : ಸಿಎಂ

Update: 2017-04-05 17:46 IST

ಗುಂಡ್ಲುಪೇಟೆ, ಎ.5: ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಆ ಪಕ್ಷದ ನಾಯಕರು ಇಲ್ಲಿ ಬೀಗುತ್ತಿದ್ದಾರೆ. ಜಾತಿ, ಧರ್ಮದ ಹೆಸರಲ್ಲಿ ಗೆಲುವು ಸಾಧಿಸಲು ಬಿಜೆಪಿಯವರಿಂದ ಸಾಧ್ಯವಿಲ್ಲ. ಇಲ್ಲಿ ಆ ಪಕ್ಷದ ಆಟ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬುಧವಾರ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಹರವೆ ಗ್ರಾಮದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಸಾಧು, ಸಂತರು, ಶರಣರು ನೆಲೆಸಿದ್ದ ನಾಡು. ಬಸವಣ್ಣ, ಕನಕದಾಸ, ಕುವೆಂಪು, ಭಗೀರಥರನ್ನು ಕಂಡ ರಾಜ್ಯವಿದು ಎಂದರು.

ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸಿನ ನಾಡು ಇದು. ನಾವು ಅದಕ್ಕೆ ಭದ್ರ ಬುನಾದಿ ಹಾಕಿದ್ದೇವೆ. ಜಾತಿ, ಧರ್ಮದ ಹೆಸರಲ್ಲಿ ಗೆಲುವು ಸಾಧಿಸಲು ಬಿಜೆಪಿಯವರಿಂದ ಸಾಧ್ಯವಿಲ್ಲ. ಇಲ್ಲಿ ಆ ಪಕ್ಷದ ಆಟ ನಡೆಯುವುದಿಲ್ಲ. ಇದು ಕರ್ನಾಟಕ, ಉತ್ತರ ಪ್ರದೇಶವಲ್ಲ ಎಂದು ಅವರು ಹೇಳಿದರು.

ಸಂಸ್ಕೃತಿಯಿಲ್ಲದ ಬಿಜೆಪಿ:

ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಬಿಜೆಪಿಯವರಿಗೆ ಸಂಸ್ಕೃತಿ ಎಂಬುದೇ ಇಲ್ಲ. ಹೆಣ್ಣು ಮಕ್ಕಳ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಅವರ ಬಗ್ಗೆ ಬಿಜೆಪಿ ನಾಯಕರು ಕೆಟ್ಟದಾಗಿ ಮಾತನಾಡಿದ್ದಾರೆ. ಪತಿ ಕಳೆದುಕೊಂಡು ದುಃಖದಲ್ಲಿರುವ ಒಬ್ಬ ಮಹಿಳೆ ಕುರಿತು ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಕಣಕ್ಕಿಳಿಯಲು ಗೀತಾ ಆರಂಭದಲ್ಲಿ ಒಪ್ಪಿರಲಿಲ್ಲ. ಪತಿ ಕಳೆದುಕೊಂಡ ದುಃಖದಲ್ಲಿದ್ದೇನೆ. ನನಗೆ ರಾಜಕೀಯ ಬೇಡವೆಂದಿದ್ದರು. ಮಹದೇವಪ್ರಸಾದ್ ನಮಗೆ ಆತ್ಮೀಯ ಹಾಗೂ ನಂಬಿಕಸ್ಥ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ನಿಧನ ನಮಗೂ ತೀವ್ರ ದುಃಖ ಉಂಟು ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು. ಹಾಗೆಂದು, ಚುನಾವಣೆಯಿಂದ ನಾವು ವಿಮುಖರಾಗಲು ಸಾಧ್ಯವಿಲ್ಲ. ಎಷ್ಟೇ ನೋವಿನಲ್ಲಿದ್ದರೂ ನೀವು ಸ್ಪರ್ಧೆ ಮಾಡಲೇಬೇಕು ಎಂದು ನಾವೇ ಅವರ ಮೇಲೆ ಒತ್ತಡ ಹಾಕಿದ್ದು. ಮಹದೇವಪ್ರಸಾದ್ ಇದ್ದಿದ್ದರೆ ಗೀತಾ ಅವರು ರಾಜಕೀಯದ ಕಡೆ ತಲೆ ಹಾಕುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ವಿವರಿಸಿದರು.

ಬದನೆಕಾಯಿ ಕೂಡ ಕೊಟ್ಟಿಲ್ಲ:

ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪಗುಂಡ್ಲುಪೇಟೆಗೆ, ರಾಜ್ಯಕ್ಕೆ ಏನೂ ಮಾಡಲಿಲ್ಲ. ಬದನೆಕಾಯಿಯನ್ನೂ ಕೊಡಲಿಲ್ಲ. ಈಗ ಅಭಿವದ್ಧಿಯ ಮಾತುಗಳನ್ನಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬ ಭಯದಿಂದ ಒಮ್ಮೆಯೂ ಚಾಮರಾಜನಗರಕ್ಕೆ ಹೋಗದ ಯಡಿಯೂರಪ್ಪ, ಈಗ ಯಾವ ರೀತಿ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಚಾಮರಾಜನಗರಕ್ಕೆ ಹೋಗಬೇಡಿ ಎಂದು ನನಗೂ ಕೆಲವರು ಹೇಳಿದ್ದರು. ಆದರೆ, ಅಲ್ಲಿಗೆ ಹೋಗಿ ಬಂದ ಬಳಿಕ ನನ್ನ ಸ್ಥಾನ ಗಟ್ಟಿ ಆಯಿತು. 2018ರ ವಿಧಾನಸಭೆ ಚುನಾವಣೆ ಬಳಿಕ ನಾನು ಮುಖ್ಯಮಂತ್ರಿಯಾಗುತ್ತೇನೆ. ಅದಕ್ಕೆ ಗುಂಡ್ಲುಪೇಟೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದು ಯಡಿಯೂರಪ್ಪ ಮತ ಯಾಚನೆ ಮಾಡುತ್ತಿದ್ದಾರೆ. ಚಾಮರಾಜನಗರ ಎಂದರೆ ಭಯಪಡುವವರು ಈಗ ಇಲ್ಲಿಗೆ ಬಂದು ಮತ ಕೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಆಹಾರ ಭದ್ರತಾ ಕಾಯಿದೆ ಜಾರಿಗೆ ತಂದಿದ್ದು ಯುಪಿಎ ಸರಕಾರ. ಆದರೆ ಯಡಿಯೂರಪ್ಪಈಗಿನ ಕೇಂದ್ರ ಸರಕಾರ ಅಕ್ಕಿ ನೀಡುತ್ತಿದೆ. ಅದನ್ನೆ ರಾಜ್ಯ ಸರಕಾರ ಹಂಚುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏಕೆ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿದ್ದರೆ ಅದಕ್ಕೆ ಮಹದೇವಪ್ರಸಾದ್ ಅವರ ಶ್ರಮ ಕಾರಣವೆ ಹೊರತು ಬಿಜೆಪಿಯವರಲ್ಲ. ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿಯ ಹಿಂದೆಯೂ ಪ್ರಸಾದ್ ಶ್ರಮ ಅಡಗಿದೆ. 20-25 ವರ್ಷಗಳ ಕಾಲ ಅವರು ಕ್ಷೇತ್ರದ ಅಭಿವೃದ್ಧಿಗೆ ಕಷ್ಟಪಟ್ಟಿದ್ದರು. ನಮ್ಮ ಸರಕಾರದ ಅವಧಿ ಇನ್ನೂ ಒಂದು ವರ್ಷ ಇದೆ. ಹೀಗಿರುವಾಗ ಬಿಜೆಪಿಯವರು ಇಲ್ಲಿ ಗೆದ್ದು ಮಾಡುವುದಾದರೂ ಏನು? ಯಾವ ಅಭಿವೃದ್ಧಿಯನ್ನೂ ಮಾಡದ ಬಿಜೆಪಿಯವರಿಗೆ ಮತ ಕೇಳಲು ಯಾವ ನೈತಿಕ ಹಕ್ಕು ಇದೆ ಎಂದು ಅವರು ಹೇಳಿದರು.

ಮೂರು ಲೀಟರ್ ಸೀಮೆಎಣ್ಣೆ:

ಸೀಮೆಎಣ್ಣೆ ಕೊರತೆ ಕುರಿತು ಸಭೆಯಲ್ಲಿದ್ದವರು ಗಮನ ಸೆಳೆದಾಗ ಅದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಅಡುಗೆ ಅನಿಲದ ಸಂಪರ್ಕ ಹೊಂದಿರುವವರಿಗೆ ಒಂದು ಲೀಟರ್ ಮತ್ತು ಅಡುಗೆ ಅನಿಲ ಸಂಪರ್ಕ ಇಲ್ಲದವರಿಗೆ ಮೂರು ಲೀಟರ್ ಸೀಮೆಎಣ್ಣೆ ವಿತರಿಸಲಾಗುವುದು. ಈ ಸೌಲಭ್ಯ ಎಪ್ರಿಲ್ 1 ರಿಂದ ಜಾರಿಗೆ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.

ಕುಡಿಯುವ ನೀರಿನ ಯೋಜನೆ ಶೀಘ್ರ ಉದ್ಘಾಟನೆ:

ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮೇ ತಿಂಗಳಲ್ಲಿ ಉದ್ಘಾಟನೆ ನೆರವೇರಿಸಲಾಗುವುದು. ಈ ಯೋಜನೆಯಿಂದ 139 ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಗ್ರಾಮಸ್ಥರು ಮುಕ್ತರಾಗಲಿದ್ದಾರೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News