ಪರೀಕ್ಷಾ ಕೇಂದ್ರದ ಸಿಬ್ಬಂದಿಗಳಿಂದ ಸಾಮೂಹಿಕ ನಕಲಿಗೆ ಸಹಕಾರ..! ; ಬೇಲಿಯೇ ಎದ್ದು ಹೊಲ ಮೇಯ್ದಂತೆ !

Update: 2017-04-05 14:16 GMT

ಗದಗ, ಎ.5:  ಈ ಬಾರಿಯ ಪರಿಕ್ಷೆಯಲ್ಲಿ ಭಾರೀ ಪ್ರಮಾಣದ ನಕಲು ನಡೆಯುತ್ತಿದ್ದು, ಸ್ವತ: ಪರೀಕ್ಷಾ ಕೇಂದ್ರದ ಸಿಬ್ಬಂದಿಯೇ ನಕಲಿಗೆ ಸಹಕಾರ ನೀಡಿರುವುದು ಇಂದು ಬೆಳಕಿಗೆ ಬಂದಿದೆ.

ಇಂತಹದ್ದೊಂದು ಪ್ರಕರಣ ಗದಗ ತಾಲೂಕಿನ ಹೊಂಬಳ ಗ್ರಾಮದ ಸರಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಇಂದು ನಡೆದ ಇಂಗ್ಲೀಷ್ ಪತ್ರಿಕೆಯಲ್ಲಿ 331 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷಾರ್ಥಿಗಳಿಗೆ ಕೇವಲ 14 ಬ್ಲಾಕ್ ಗಳು ಮಾತ್ರ ತೆರೆಯಲಾಗಿತ್ತು. ಸ್ವತ: ಪರೀಕ್ಷಾ ಸಿಬ್ಬಂದಿ ಒಂದು ಅಂಕದ ಪ್ರಶ್ನೆಗಳಿಗೆ ಪ್ರಶ್ನೆ ಪತ್ರಿಕೆಯಲ್ಲಿಯೇ ಉತ್ತರ ಬರೆಸುವ ಮೂಲಕ ತಪ್ಪೆಸಗಿದ್ದಾರೆ.

ಹಿಂದಿನ ಪರೀಕ್ಷಾ ಅವಧಿಯಲ್ಲಿ ಈ ಪರೀಕ್ಷಾ ಕೇಂದ್ರದಲ್ಲಿ ಈ ಹಿಂದೆಯೂ ನಕಲಿನ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕೂಡ ಪರಿಶೀಲನೆ ನಡೆಸಿದ್ದರು. ಇಷ್ಟಾದರು ಇಂದು ಪುನ: ಉತ್ತರ ಬೆರೆಸುವ ಮೂಲಕ ಇಲ್ಲಿನ ಸಿಬ್ಬಂದಿಗಳು ರಾಜಾರೋಷವಾಗಿಯೇ ಪರೀಕ್ಷೆ ಬರೆಸಿದ್ದಾರೆ. ಜೊತೆಗೆ ಚಿಕ್ಕ ಡೆಸ್ಕ್ ಒಂದರಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕುಳಿತು ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಈ ಕೇಂದ್ರದಲ್ಲಿ ಒಂದು ಕೊಠಡಿಯಲ್ಲಿ ಮೂರರಿಂದ ನಾಲ್ಕು ಬ್ಲಾಕ್ ನಿರ್ಮಿಸಲಾಗಿದೆ. ಇನ್ನು ಮುಖ್ಯವಾಗಿ ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿಯನ್ನೇ ಅಳವಡಿಸಿಲ್ಲ. ಇಷ್ಟೆಲ್ಲ ಅವ್ಯವಸ್ಥೆ ಹಾಗೂ ನಕಲು ನಡೆದಿರುವ ಬಗ್ಗೆ ಸ್ವತ: ಕೇಂದ್ರದ ಮುಖ್ಯ ಅಧೀಕ್ಷಕ ಬಸುರಾಜ ಮಜ್ಜಗಿ ತಮ್ಮಿಂದಾದ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಶಿಕ್ಷಣ ಕಾಯ್ದೆ ಪ್ರಕಾರ ಪರೀಕ್ಷಾ ಕೇಂದ್ರದ ಶಾಲೆಯ ಶಿಕ್ಷಕರನ್ನು ಮುಖ್ಯ ಅಧಿಕ್ಷಕರನ್ನಾಗಿ ನೇಮಕ ಮಾಡಬಾರದು, ಹೀಗಿದ್ದಾಗ್ಯೂ ಡಿಡಿಪಿಐ ಹಾಗೂ ಸಂಬಂಧಿಸಿದ ಅಧಿಕಾರಿಗಳು ಇವರನ್ನು ಏಕೆ ನೇಮಕ ಮಾಡಿದರು ಅನ್ನುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಷ್ಟಕ್ಕೂ ಕೇಂದ್ರದ ಮುಖ್ಯ ಅಧೀಕ್ಷಕರೆ ತಮ್ಮ ತಪ್ಪನ್ನು ಒಪ್ಪಿಕೊಂಡ ನಂತರ, ಪ್ರತಿಕ್ರಿಯೇಗಾಗಿ ಡಿಡಿಪಿಐಗೆ ಸಂಪರ್ಕಿಸಿದಾಗ ಬೆಳಗಿನಿಂದಲೂ ಸಂಪರ್ಕಕ್ಕೆ ಬಾರದೇ ಶಿಕ್ಷಣ ಪ್ರೇಮಿಗಳಲ್ಲಿ ಮತ್ತಷ್ಟು ಅನುಮಾನಕ್ಕೆ ಆಸ್ಪದ ಮಾಡಿ ಕೊಟ್ಟಿದ್ದಾರೆ.

ಪರೀಕ್ಷೆಯಲ್ಲಿ ನಡೆಯುವ ನಕಲಿನಿಂದ ಅದೆಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಗೆ ಸ್ವತ: ಶಿಕ್ಷಕರೇ ಕೊಡಲಿ ಪೆಟ್ಟು ಹಾಕಿದಂತೆ ಸದ್ಯ ಈ ಪರಿಕ್ಷಾ ಕೇಂದ್ರದಲ್ಲಿ ನಡೆದಿದೆ. ತಮ್ಮ ಶಾಲೆಯ ಫಲಿತಾಂಶ ಹೆಚ್ಚಿಸುವ ಹುಚ್ಚು ಆಸೆಯಿಂದ ಪರೀಕ್ಷೆಗಳ ಮೌಲ್ಯಗಳನ್ನೆ ಕಳೆಯುತ್ತಿರುವ ಇಂತಹ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಅಂತಾ ಜಿಲ್ಲೆಯ ಜನ ಆರೋಪಿಸುತ್ತಿದ್ದಾರೆ.

Writer - ಫಾರೂಕ್ ಮಕಾನದಾರ

contributor

Editor - ಫಾರೂಕ್ ಮಕಾನದಾರ

contributor

Similar News