ಬಿಗ್‌ಬಾಸ್ ನ " ಒಳ್ಳೆ ಹುಡುಗ " ಪ್ರಥಮ್ ವಿರುದ್ಧ ದೂರು, ಆತ್ಮಹತ್ಯೆಯ ಹೈಡ್ರಾಮ !
ಬೆಂಗಳೂರು, ಎ.5: ಕನ್ನಡದ ಬಿಗ್‌ಬಾಸ್ ಪ್ರಥಮ್ ನನ್ನ ವಿರುದ್ಧ ಹಲ್ಲೆ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಬಿ.ಎನ್.ಲೋಕೇಶ್ ಎಂಬುವರು ಇಲ್ಲಿನ ಬಸವೇಶ್ವರ ನಗರ ಪೊಲೀಸ್‌ಠಾಣೆಯಲ್ಲಿ ದೂರು ನೀಡಿದ ಬೆನ್ನಲ್ಲೇ, ಎರಡು ನಿದ್ರೆ ಮಾತ್ರೆ ಸೇವಿಸಿ ಪ್ರಥಮ್ ಆತ್ಮಹತ್ಯೆಯ ನಾಟಕವಾಡಿದ್ದಾರೆನ್ನಲಾಗಿದೆ.
ಮೂರು ವರ್ಷಗಳಿಂದ ನಾವಿಬ್ಬರೂ ಸ್ನೇಹಿತರಾಗಿದ್ದು, ಪ್ರಥಮ್ ಬಿಗ್‌ಬಾಸ್ ಶೋಗೆ ಹೋದ ದಿನದಿಂದ ಆತ ವಿಜಯ ಸಾಧಿಸುವರೆಗೂ ಆತನ ಬಗ್ಗೆ ಉತ್ತಮ ಪ್ರಚಾರ ಮಾಡಿದೆ. ಬಳಿಕ ಜೊತೆಯಲ್ಲೇ ಇದ್ದವು. ಆದರೆ, ಈ ನಡುವೆ ಸಣ್ಣಪುಟ್ಟ ವಿಯಷಕ್ಕೆ ನಮ್ಮಿಬ್ಬರ ನಡುವೆ ಮನಸ್ತಾಪವಾಯಿತು.
ಇತ್ತೀಚಿಗೆ ನನ್ನ ಹೆಸರು ಹೇಳಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದ್ದಾನೆ ಎಂದು ಪ್ರಥಮ್ ಹೇಳಿದ್ದ. ಈ ಕಾರಣದಿಂದ ನನಗೆ ಬೇಸರವಾಗಿ ಜಗಳವಾಯಿತು. ಸೋಮವಾರ(ಎ.3) ರಾತ್ರಿ 9:30 ಸುಮಾರಿಗೆ ನನಗೆ ಪ್ರಥಮ್ ಮೊಬೈಲ್ ಮೂಲಕ ಕರೆ ಮಾಡಿ, ನಾನು ಡೆತ್‌ನೋಟ್ ಬರೆದಿಟ್ಟು ಸಾಯುತ್ತಿದ್ದೇನೆ ಎಂದು ಹೆದರಿಸಿದ್ದ. ಬಳಿಕ ನಗರದ ಕುರುಬರಹಳ್ಳಿಗೆ ನನ್ನನ್ನು ಕರೆಸಿಕೊಂಡು ಹಲ್ಲೆ ನಡೆಸಿದ್ದಾನೆ ಎಂದು ಲೋಕೇಶ್ ಆರೋಪಿಸಿ ದೂರು ನೀಡಿದ್ದಾರೆ.
ಆತ್ಮಹತ್ಯೆಗೆ ಯತ್ನ: ಬುಧವಾರ ಮುಂಜಾನೆ ಫೇಸ್‌ಬುಕ್‌ನಲ್ಲಿ ಪ್ರಥಮ್ ತನ್ನ ವೈಯಕ್ತಿಕ ಹಾಗೂ ಸ್ನೇಹಿತರ ಕಿರುಕುಳದಿಂದ ನಿದ್ರೆ ಮಾತ್ರೆ ಸೇವಿಸಿದ್ದು, ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಹೇಳಿದ ತಕ್ಷಣ ಅವರ ಸಂಬಂಧಿಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನೇರ ಮಾತು:
ಬಿಗ್‌ಬಾಸ್‌ನಲ್ಲಿ ಗೆದ್ದ ಹಣಕ್ಕೆ ಸಂಬಂಧಿಸಿದಂತೆ ನನ್ನ ಸ್ನೇಹಿತ ಲೋಕೇಶ್ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಕೆಲವರು ನನಗೆ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ನನ್ನ ಕೆಲಸವನ್ನು ಕೆಟ್ಟದ್ದಾಗಿ ತೋರಿಸುತ್ತಿದ್ದಾರೆ. ಇನ್ನು ಮುಂದೆ ಯಾರಿಗೂ ಬೇಸರ ಮಾಡುವುದಿಲ್ಲ. ಈಗಾಗಲೇ ನಾನು ನಿದ್ರೆ ಮಾತ್ರೆಗಳನ್ನು ಸೇವಿಸಿದ್ದೇನೆ. ಇದು ನನ್ನ ಕೊನೆಯ ಮಾತುಗಳು ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ನಾಗರಬಾವಿಯ ಅಪೂರ್ವ ಲೇಔಟ್‌ನ ಸ್ವಾತಿ ಹೊಟೇಲ್ ಬಳಿ ವಾಸವಾಗಿರುವ ಪ್ರಥಮ್ ಅವರ ನಿವಾಸಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಥಮ್ ಎರಡು ನಿದ್ದೆ ಮಾತ್ರೆಯನ್ನು ಸೇವಿಸಿದ್ದು. ಪ್ರಾಣಕ್ಕೆ ಅಪಾಯವಿಲ್ಲ ಎಂದು ತಿಳಿದು ಬಂದಿದೆ.
ಮಗನ ಸ್ಥಿತಿ ಕಂಡು ತುಂಬಾ ನೋವಾಗುತ್ತಿದೆ. ವೈದ್ಯರು 3-4 ಗಂಟೆ ಆಸ್ಪತ್ರೆಯಲ್ಲೇ ಇರಬೇಕೆಂದು ಹೇಳಿದ್ದಾರೆ. ಬಿಗ್‌ಬಾಸ್‌ನಲ್ಲಿ ಗೆದ್ದ ಹಣ ಬ್ಯಾಂಕ್‌ನಿಂದ ಪಡೆಯಲು ಪಾನ್‌ಕಾರ್ಡ್, ಆಧಾರ್ ಕಾರ್ಡ್ ಬೇಕು ಎಂದಿದ್ದರು. ಹೀಗಾಗಿ, ಊರಿಗೆ ಹೋಗಿದ್ದೆ.
- ಮಲ್ಲಣ್ಣ, ಪ್ರಥಮ್ ತಂದೆ