ವಿದ್ಯಾರ್ಥಿನಿ ನಾಪತ್ತೆ
ಮಡಿಕೇರಿ, ಎ.5: ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯ ಕಾರಿನೊಂದಿಗೆ ಹಠಾತ್ತನೆ ನಾಪತ್ತೆಯಾಗಿರುವ ಘಟನೆ ವೀರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ. ಹ ಲವು ಊಹಾಪೋಹಗಳಿಗೆ ಕಾರಣವಾಗಿರುವ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆೆಯುವ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ವೀರಾಜಪೇಟೆಯ ಸಂತ ಅನ್ನಮ್ಮ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಏಕಾಏಕಿ ಬಿಟ್ಟಂಗಾಲದ ತನ್ನ ಮನೆಯಿಂದ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಆಕೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ಮನೆಯಿಂದ ಮಗಳನ್ನು ಯಾರೋ ಅಪಹರಣ ಮಾಡಿರುವುದಾಗಿ ತಿಳಿಸಿದ್ದು, ಈ ಬಗ್ಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ವಿದ್ಯಾರ್ಥಿನಿಯ ತಂದೆ ಕಾರ್ಯನಿಮಿತ್ತ ವೀರಾಜಪೇಟೆಗೆ ತೆರಳಿದ್ದು, ಹಿಂದಿರುಗಿ ಬಂದು ನೋಡಿದಾಗ ಮನೆಯಲ್ಲಿ ಮಗಳು ಇರಲಿಲ್ಲ. ಈಕೆಯ ಬಗ್ಗೆ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿನಿ ಕಾರನ್ನು ಚಾಲನೆಮಾಡಿಕೊಂಡು ಬಿಟ್ಟಂಗಾಲದಿಂದ ಗೋಣಿಕೊಪ್ಪಲಿನತ್ತ ಸಾಗುತ್ತಿದ್ದ ಬಗ್ಗೆ ಪರಿಚಯಸ್ಥರು ವಿದ್ಯಾರ್ಥಿನಿಯ ತಂದೆಗೆ ತಿಳಿಸಿದ್ದು, ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಅಕ್ಕಪಕ್ಕದ ಜಿಲ್ಲೆಗಳ ಪೊಲೀಸ್ ಠಾಣೆಗಳ ಸಹಕಾರವನ್ನು ಕೂಡ ಕೋರಲಾಗಿದೆ.