ಆರೋಪಿಗೆ 3 ವರ್ಷ ಶಿಕ್ಷೆ
ತುಮಕೂರು, ಎ.5: ವಿದ್ಯಾರ್ಥಿನಿಯನ್ನು ಶಾಲೆಯಿಂದ ‘ನಿಮ್ಮ ತಂದೆಗೆ ಹುಷಾರಿಲ್ಲ’ ಎಂದು ಹೇಳಿ ಅಪಹರಿಸಿದ್ದ ಆರೋಪಿಗೆ ತುಮಕೂರಿನ 3ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಮೂರು ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಆರೋಪಿ ಮಂಜುನಾಥ್ 2013ರ ಫೆ.1ರಂದು ತನ್ನ ಸ್ನೇಹಿತರಾದ ಆಟೊ ಡ್ರೈವರ್ ಮಂಜುನಾಥ ಮತ್ತು ಸಿದ್ದರಾಜು ಅವರೊಂದಿಗೆ ಸೇರಿ ಬ್ರಹ್ಮಸಂದ್ರ ಗ್ರಾಮದ ಶಾಲೆಯಲ್ಲಿ ಕಲಿಯುತ್ತಿದ್ದ 9ನೆ ತರಗತಿ ವಿದ್ಯಾರ್ಥಿನಿಯನ್ನು ‘ನಿಮ್ಮ ತಂದೆಗೆ ಹುಷಾರಿಲ್ಲ’ ಎಂದು ಶಾಲೆಯಿಂದ ಕರೆದುಕೊಂಡು ಹೋಗಿ ಆಟೊದಲ್ಲಿ ಅಪಹರಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಕೋರ ಪೊಲೀಸ್ ಠಾಣೆಯ ಪಿಎಸ್ಸೈ ಅವಿನಾಶ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಸದರಿ ಕೇಸಿನ ವಿಚಾರಣೆ ನಡೆಸಿದ 3ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ವಿಶೇಷ)ದ ನ್ಯಾಯಾಧೀಶ ಪಿ.ಟಿ.ಕಟ್ಟಿಮನಿ ಅವರು ಐಪಿಸಿ ಕಲಂ 363ರ ಅಪರಾಧಕ್ಕಾಗಿ ಮಂಜುನಾಥನಿಗೆ 3 ವರ್ಷ ಸಾದಾ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ 45 ಸಾವಿರ ರೂ.ಯನ್ನು ದೂರುದಾರರಿಗೆ ಪರಿಹಾರ ನೀಡುವಂತೆ ತೀರ್ಪು ನೀಡಿದೆ.