ಗಾಂಧಿ ತತ್ವದ ಪರಿಚಾರಕ ಡಾ.ಹೊ.ಶ್ರೀನಿವಾಸಯ್ಯ ವಿಧಿ ವಶ

Update: 2017-04-06 12:35 GMT

ಬೆಂಗಳೂರು, ಎ.6: ತಮ್ಮ ಇಡೀ ಜೀವನವನ್ನು ಗಾಂಧಿ ತತ್ವದಂತೆ ಬಾಳಿದ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾಗಿ ರಾಜ್ಯದೆಲ್ಲೆಡೆ ಗಾಂಧೀಜಿಯ ವಿಚಾರಗಳನ್ನು ಮನೆ ಮನಗಳಿಗೆ ತಲುಪಿಸುತ್ತಿದ್ದ ಹಿರಿಯ ಗಾಂಧಿವಾದಿ ಹೊ.ಶ್ರೀನಿವಾಸಯ್ಯ ವಿಧಿವಶರಾಗಿದ್ದಾರೆ.

ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 93ವರ್ಷದ ಡಾ.ಹೊ.ಶ್ರೀನಿವಾಸಯ್ಯರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು(ಎ.5) ಬೆಳಗ್ಗೆ ವಿಧಿವಶರಾಗಿದ್ದಾರೆ. ಇವರ ನಿಧನದಿಂದ ಗಾಂಧಿ ಪರಂಪರೆಗೆ ಸಾಕ್ಷಿಪ್ರಜ್ಞೆಯಾಗಿದ್ದ ಜೀವವೊಂದು ನಮ್ಮೆಂದಿಗಿಲ್ಲವೆಂಬ ನೋವು ಗಾಂಧಿವಾದಿಗಳಲ್ಲಿ ಮಡುಗಟ್ಟಿತ್ತು.

ಕಣ್ಣು ಹಾಗೂ ದೇಹದಾನ:

ತಮ್ಮ ಇಡೀ ಬದುಕಿನುದ್ದಕ್ಕೂ ಜನರಿಗಾಗಿ ಬದುಕಿದ್ದ ಡಾ.ಹೊ.ಶ್ರೀನಿವಾಸಯ್ಯ ಮರಣಾನಂತರವೂ ತಮ್ಮ ದೇಹವನ್ನು ಜನರ ಉಪಯೋಗಕ್ಕೆ ಬಿಟ್ಟುಕೊಟ್ಟಿದ್ದಾರೆ. ತಮ್ಮ ಕಣ್ಣು ಹಾಗೂ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನವಾಗಿ ಕೊಡುವುದಾಗಿ ಈ ಮೊದಲೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಗಾಂಧಿ ಭವನದಲ್ಲಿ ಸರಕಾರಿ ಗೌರವಗಳೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿ, ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಯಿತು.

ಅದಮ್ಯ ಜೀವನೋತ್ಸಾಹದ ಪ್ರತಿರೂಪ:

ಅದು ಯಾವುದೇ ಕಾರ್ಯಕ್ರಮವಿರಲಿ. ಅವರಾಡುತ್ತಿದ್ದ ಮಾತು ಜೀವನ ಪ್ರೀತಿಯೊಂದೇ. ನನಗೆ 90ವರ್ಷಕ್ಕಿಂತ ಹೆಚ್ಚಾಗಿದೆ. ಆದರೂ ಈಗಲೂ ನಾನೂ ಯುವಕನೇ. ಇನ್ನು ನೂರು ವರ್ಷ ಹೀಗೆಯೇ ಬಾಳಬೇಕೆಂದು ಇಚ್ಛಿಸುತ್ತೇನೆಂದು ಹೇಳುವ ಮೂಲಕ ನೆರೆದಿದ್ದವರಲ್ಲಿ ಜೀವನೋತ್ಸವ ಪುಟಿಯುವಂತೆ ಮಾತನಾಡುತ್ತಿದ್ದರು.

ಹಿರಿಯ ಸ್ವಾತಂತ್ರ ಹೋರಾಟಗಾರ:

1942ರಿಂದ 47ರವರೆಗಿನ ಸ್ವಾತಂತ್ರ ಸಂಗ್ರಾಮದಲ್ಲಿ ಸಕ್ರಿಯಾ ಪಾತ್ರ ವಹಿಸಿ, ರಹಸ್ಯ ಪತ್ರಿಕೆಗಳ ಪ್ರಕಟಣೆ ಮತ್ತು ಹಂಚುವಂತಹ ಕೆಲಸ ಮಾಡುವ ಮೂಲಕ ಜೈಲುವಾಸ ಅನುಭವಿಸಿದ್ದಾರೆ. 1946ರ ವಿದ್ಯಾರ್ಥಿಗಳ ವಂದೇ ಮಾತರಂ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಹೀಗೆ ಸ್ವಾತಂತ್ರ ಪೂರ್ವದಿಂದ ಸ್ವಾತಂತ್ರ ನಂತರದವರೆಗೂ ದೇಶಕ್ಕಾಗಿ ತನು-ಮನವನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ.

ಸಾಹಿತ್ಯದ ಪರಿಚಾರಕ: ಬಾಲ್ಯದಿಂದಲೂ ಸಾಹಿತ್ಯಾಸಕ್ತಿಯನ್ನು ಮೂಡಿಸಿಕೊಂಡಿದ್ದ ಹೊ.ಶ್ರೀನಿವಾಸಯ್ಯ, ಪ್ರವಾಸ, ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ, ಪ್ರಕೃತಿ ಜೀವನ, ಯೋಗ, ಕಾರ್ಮಿಕರ ಜೀವನ, ಜೀವನ ಶೈಲಿ ಸೇರಿದಂತೆ ಅನೇಕ ಪ್ರಕಾರದ ಸಾಹಿತ್ಯವನ್ನು ರಚಿಸುವ ಮೂಲಕ ಗಾಂಧಿ ತತ್ವವನ್ನು ಜನತೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಾ.ಹೊ.ಶ್ರೀನಿವಾಸಯ್ಯರವರ ನಿಧನದಿಂದ ರಾಷ್ಟ್ರವು ನಿಷ್ಠಾವಂತ ಗಾಂಧಿವಾದಿಯನ್ನು ಕಳೆದುಕೊಂಡಂತಾಗಿದೆ. ತಮ್ಮ ಇಡೀ ಜೀವನವನ್ನು ಗಾಂಧಿ ತತ್ವದಂತೆ ಬಾಳಿದ ಅವರು ಯುವ ಜನತೆಗೆ ಸದಾ ಮಾದರಿ.

-ಎಂ.ವಿ.ರಾಜಶೇಖರನ್ ಮಾಜಿ ಸಚಿವ

ಕರ್ನಾಟಕ ಸ್ಮಾರಕ ನಿಧಿಗೆ ಹೊಸ ಚೈತನ್ಯವನ್ನು ನೀಡಿ ರಾಜ್ಯಾದ್ಯಂತ ಗಾಂಧಿ ತತ್ವವನ್ನು ಮನೆ ಮನಗಳಿಗೆ ತಲುಪಿಸುವಲ್ಲಿ ಹೊ.ಶ್ರೀನಿವಾಸಯ್ಯನವರು ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಇವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸೋಣ.

-ಮಲ್ಲೇಪುರಂ ಜಿ.ವೆಂಕಟೇಶ್, ಹಿರಿಯ ಸಾಹಿತಿ

ಹೊ.ಶ್ರೀನಿವಾಸಯ್ಯ ನಮ್ಮೆಲ್ಲರಿಗೂ ಆದರ್ಶ ಪ್ರಾಯರಾಗಿದ್ದರು. ಅವರ ನಡೆ-ನುಡಿಯಿಂದಲೇ ಸಾಕಷ್ಟು ಕಲಿತಿದ್ದೇವೆ. ಪ್ರಕೃತಿ ಪ್ರೇಮ, ಮಕ್ಕಳ ಮೇಲಿನ ಅವರ ಪ್ರೀತಿ ಅವರ ಮನಸನ್ನು ಸದಾ ಉಲ್ಲಸಿತರನ್ನಾಗಿ ಮಾಡಿತ್ತು. ಅವರು ಜೀವನಾದರ್ಶಗಳನ್ನು ನಾವೆಲ್ಲರೂ ಪಾಲಿಸೋಣ.

-ಎ.ಜೆ.ಸದಾಶಿವ ನಿವೃತ್ತ ನ್ಯಾಯಮೂರ್ತಿ

ಸಿಎಂ ಸಂತಾಪ:

 ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಹಾಗೂ ಅಪ್ಪಟ ಗಾಂಧಿವಾದಿ ಡಾ.ಹೊ.ಶ್ರೀನಿವಾಸಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

 ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸತ್ವಭರಿತ ತತ್ವಗಳು ಹಾಗೂ ಮೌಲಿಕ ಆದರ್ಶಗಳಿಂದ ಪ್ರಭಾವಿತರಾದ ಲಕ್ಷಾಂತರ ಮಂದಿಯಲ್ಲಿ ಶ್ರೀನಿವಾಸಯ್ಯ ಅವರೂ ಒಬ್ಬರು. ಮೆಕಾನಿಕಲ್ ಎಂಜಿನಿಯರ್ ಆಗಿ ಜರ್ಮನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಶ್ರೀನಿವಾಸಯ್ಯರಿಗೆ ಗಾಂಧೀಜಿ ಸರಳತೆಯ ಸಿದ್ಧಾಂತ ಅತ್ಯಾಕರ್ಷಕವಾಗಿ ಕಂಡಿತು.

ಸರಳತೆ ಬೋಧಿಸಲು ಸುಲಭ ಆದರೆ, ಪಾಲಿಸಲು ಕಷ್ಟ ಎಂಬುದನ್ನು ಮನಗಂಡ ಅವರು ಮೊದಲು ಸರಳತೆ ದೀಕ್ಷೆ ಪಡೆದರು. ಖಾದಿ ಬಟ್ಟೆ ತೊಟ್ಟರು. ಜಾತ್ಯತೀತ ನಿಲುವಿಗೆ ಬದ್ಧರಾದರು. ಗಾಂಧೀಜಿ ಅವರ ಸಂದೇಶಗಳನ್ನು ಪ್ರಚುರಪಡಿಸಲು ಟೊಂಕ ಕಟ್ಟಿ ನಿಂತರು.

ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ, ಅಧ್ಯಕ್ಷರಾಗಿ ಮೂರು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಅವರು ತಮ್ಮ ಅಧಿಕಾರವಧಿಯಲ್ಲಿ ಗಾಂಧಿ ಭವನವನ್ನು ಸದಾ ಚಟುವಟಿಕೆಗಳ ಕೇಂದ್ರವನ್ನಾಗಿಸಿದ್ದರು. ಮದ್ಯಪಾನ ಸಂಯಮ ಹಾಗೂ ಮಾದಕ ವಸ್ತುಗಳ ಬಳಕೆಯ ತಡೆ ಮೂಲಕ ವ್ಯಸನ-ಮುಕ್ತ ಕರ್ನಾಟಕ ರೂಪಿಸಲು ಶ್ರಮಿಸಿದ್ದರು.

ಗಾಂಧೀಜಿ ಅವರ 150 ಜನ್ಮದಿನಾಚರಣೆ ವೇಳೆ ವರ್ಷವಿಡೀ ಕಾರ್ಯಕ್ರಮ ರೂಪಿಸಿ ಅತ್ಯಂತ ಸರಳತೆ, ಅತ್ಯಂತ ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಯೋಜಿಸಿದ್ದರು. ಅವರ ಕನಸು ಸಾಕಾರಗೊಳ್ಳುವ ಮುನ್ನವೆ ಅವರು ಇಲ್ಲವಾಗಿದ್ದಾರೆ ಎಂಬುದು ನನ್ನಲ್ಲಿ ಅತ್ಯಂತ ದುಃಖ ಹಾಗೂ ನೋವನ್ನು ಉಂಟು ಮಾಡಿದೆ ಎಂದು ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News