×
Ad

ಬಿಜೆಪಿಯ ಮಿಷನ್ 150 ಹುಸಿ ಬಾಂಬ್ ಆಗಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-04-06 19:55 IST

ನಂಜನಗೂಡು, ಎ.6: ಬಿಜೆಪಿಯ ಮಿಷನ್ 150 ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹುಸಿ ಬಾಂಬ್ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ನಂಜನಗೂಡು ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರವಾಗಿ ರೋಡ್ ಶೋ ನಡೆಸಿ ಮತಯಾಚಿಸಿದ ಮುಖ್ಯಮಂತ್ರಿ, ಕಾರ್ಯಕರ್ತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಾನು ಮುಖ್ಯಮಂತ್ರಿ ಆಗುತ್ತೇನೆ. ನಮ್ಮದು ಮಿಷನ್ 150 ಎಂದು ಯಡಿಯೂರಪ್ಪಹೇಳುತ್ತಿದ್ದಾರೆ. ಆದರೆ, ಅದು ಠುಸ್ ಆಗಲಿದೆ ಎಂದ ಅವರು, 2018ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಸರಕಾರದ ಕಾರ್ಯಕ್ರಮಗಳನ್ನು ಮೆಚ್ಚಿರುವ ಜನತೆ ನಮಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುವ ಯಡಿಯೂರಪ್ಪ, ಈ ಹಿಂದೆ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು. ಸೈಕಲ್ ಕೊಟ್ಟಿದ್ದನ್ನು ಹೊರತುಪಡಿಸಿದರೆ ಅವರಿಂದ ಏನೂ ಆಗಲಿಲ್ಲ. ಈಗ ನಾವೂ ಶಾಲಾ ಮಕ್ಕಳಿಗೆ ಸೈಕಲ್ ಕೊಡುತ್ತಿದ್ದೇವೆ. ಅದರ ಜೊತೆಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ಅವರು ಹೇಳಿದರು.

ನಮ್ಮದು ನುಡಿದಂತೆ ನಡೆಯುವ ಸರಕಾರ. ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ ಕೊಟ್ಟಿದ್ದ ಭರವಸೆಗಳ ಪೈಕಿ ಶೇ.90ರಷ್ಟು ಈಡೇರಿಸಿದ್ದೇವೆ. ನಮ್ಮ ಸಾಧನೆಗಳ ಪಟ್ಟಿ ದೊಡ್ಡದಾಗಿದೆ. ಎಲ್ಲ ವರ್ಗದವರನ್ನು ಒಗ್ಗೂಡಿಸಿಕೊಂಡು ಹೋಗುವ, ಅವರಿಗಾಗಿ ಕೆಲಸ ಮಾಡುವ ಶಕ್ತಿ ಮತ್ತು ಸಾಮರ್ಥ್ಯ ಇರುವುದು ಕಾಂಗ್ರೆಸ್‌ಗೆ ಮಾತ್ರ. ಹೀಗಿರುವಾಗ ಬಿಜೆಪಿಗೆ ಏಕೆ ಮತ ಕೊಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಬಿಜೆಪಿಯವರು ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರಿಗೆ ಒಂದೇ ಒಂದು ಟಿಕೆಟ್ ಕೊಡಲಿಲ್ಲ. ಈ ಕುರಿತು ವಿಧಾನಪರಿಷತ್ತಿನಲ್ಲಿ ನಮ್ಮ ಸದಸ್ಯರೊಬ್ಬರು ಈಶ್ವರಪ್ಪಅವರನ್ನು ಪ್ರಶ್ನಿಸಿದರೆ 'ನೋ ವೋಟ್, ನೋ ಸೀಟ್‌' ಎಂದು ಉತ್ತರಿಸಿದರು. ಅಲ್ಪಸಂಖ್ಯಾತರನ್ನು ಹೊರಗಿಡುವುದಾದರೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌' ಹೇಗೆ ಆಗುತ್ತದೆ ಎಂದು ಅವರು ಕೇಳಿದರು.

ಆರೂವರೆ ಕೋಟಿ ಜನರ ಹಣ:

ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಪಕ್ಷ ಉಪ ಚುನಾವಣೆ ನಡೆಸುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಅದು ಯಾರಪ್ಪನ ದುಡ್ಡು ಎಂದು ಕೇಳಿದ್ದಾರೆ. ಯಾರಪ್ಪನ ಮನೆಯ ಹಣವೂ ಅದಲ್ಲ. ರಾಜ್ಯದ ಆರೂವರೆ ಕೋಟಿ ಜನರ ದುಡ್ಡು ಅದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಾರ್ವಜನಿಕರ ತೆರಿಗೆ ಹಣವನ್ನು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಹೇಗೆ ಖರ್ಚು ಮಾಡಬೇಕು ಎಂಬುದು ನಮಗೂ ತಿಳಿದಿದೆ. ಆ ಬಗ್ಗೆ ಬಿಜೆಪಿಯವರಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರೇ ಜನಪ್ರತಿನಿಧಿಗಳ ಮಾಲಕರು. ಈ ತಿಳಿವಳಿಕೆ ಯಡಿಯೂರಪ್ಪಅವರಿಗೆ ಇದ್ದರೆ ಸಾಕು ಎಂದು ಮುಖ್ಯಮಂತ್ರಿ ಹೇಳಿದರು.

ಜನಶಕ್ತಿಯ ಮೇಲೆ ನಂಬಿಕೆ ಇದೆ: ಜನಶಕ್ತಿಯನ್ನು ನಂಬಿ ರಾಜಕೀಯ ಮಾಡುವವರು ನಾವು. ರಾಜ್ಯದ ಜನರ ಆಶೀರ್ವಾದ ನಮ್ಮ ಮೇಲಿದೆ. ನಮ್ಮೊಂದಿಗೆ ಲಕ್ಷಾಂತರ ಕಾರ್ಯಕರ್ತರ ಪಡೆ ಇದೆ. ಹೀಗಾಗಿ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಯಡಿಯೂರಪ್ಪಇತ್ತೀಚೆಗೆ ನನ್ನನ್ನು ಬೈಯ್ಯುವುದನ್ನೆ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ನಾವು ಬಿಜೆಪಿ ಅಭ್ಯರ್ಥಿಗಳು, ಆ ಪಕ್ಷದ ನಾಯಕರನ್ನು ಬೈಯ್ಯುವುದಿಲ್ಲ. ಏಕೆಂದರೆ ನಮ್ಮ ರಾಜಕೀಯ ಸಂಸ್ಕೃತಿಯೆ ಬೇರೆ. ಕಳೆದ 30 ವರ್ಷಗಳಿಂದ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ ಎಂದು ಯಡಿಯೂರಪ್ಪ ಹೋದ ಕಡೆ ಹೇಳುತ್ತಾರೆ. ಅವರ ಹೋರಾಟ ಎಂಥದ್ದು ಎಂಬುದನ್ನು ನಾನು ನೋಡಿದ್ದೇನೆ. ಸುಳ್ಳು ಹೇಳುವುದನ್ನು ಹೊರತುಪಡಿಸಿದರೆ ಯಾವ ಹೋರಾಟವನ್ನೂ ಅವರು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಟೀಕಿಸಿದರು.

ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದೆ ಯಡಿಯೂರಪ್ಪ:

ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದೆ ಯಡಿಯೂರಪ್ಪ.ಮುಖ್ಯಮಂತ್ರಿಯಾಗಿದ್ದಾಗ ಆಪರೇಷನ್ ಕಮಲದ ಮೂಲಕ ಎಂಟು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವಂತೆ ಅವರು ಮಾಡಿದರು. ಅಷ್ಟೇ ಅಲ್ಲ, ಚುನಾವಣೆ ಗೆಲ್ಲಲು ಪ್ರತಿ ಕ್ಷೇತ್ರಕ್ಕೆ 25 ಕೋಟಿ ರೂ.ಖರ್ಚು ಮಾಡಿದರು. ಈಗ ಅವರು ಚುನಾವಣಾ ಅಕ್ರಮದ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತದೆ. ಇದು ನಾಚಿಕೆಗೇಡು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂತ್ರದಂಡ ಕರ್ನಾಟದಲ್ಲಿ ಕೆಲಸ ಮಾಡುವುದಿಲ್ಲ. ಉತ್ತರ ಪ್ರದೇಶದಲ್ಲಿ ಬೀಸಿದ ಬಿಜೆಪಿ ಗಾಳಿ ಇಲ್ಲಿಗೆ ತಲುಪುವುದೂ ಇಲ್ಲ. ಅದು ಅಲ್ಲಿಯೇ ನಿಂತಿದೆ. ಒಂದು ವೇಳೆ ಗಾಳಿ ಬೀಸಿದ್ದರೆ ಅದು ಪಂಜಾಬ್‌ನಲ್ಲಿ ಯಾಕೆ ಬೀಸಲಿಲ್ಲ ಎಂದು ಅವರು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಆರ್.ವಿ.ದೇಶಪಾಂಡೆ, ತನ್ವೀರ್ ಸೇಠ್, ಸಂಸದ ಧ್ರುವನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News