×
Ad

ಮತದಾರರಿಗೆ ಹಣ ಹಂಚಿಕೆ ಆರೋಪದ ಸುಳಿಯಲ್ಲಿ ಲಕ್ಷ್ಮೀಹೆಬ್ಬಾಳ್ಕರ್

Update: 2017-04-06 20:22 IST

ಬೆಂಗಳೂರು, ಎ. 6: ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿಯ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರ ಉಪ ಚುನಾವಣೆ ರಂಗೇರುತ್ತಿದೆ. ಈ ಮಧ್ಯೆಯೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀಹೆಬ್ಬಾಳ್ಕರ್ ವಿರುದ್ಧ ಹಣ ಹಂಚಿಕೆ ಮಾಡುತ್ತಿರುವುದೆನ್ನಲಾದ ವಿಡಿಯೋ ತುಣಕೊಂದನ್ನು ಬಿಜೆಪಿ ಬಹಿರಂಗಪಡಿಸಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಉಪ ಚುನಾವಣೆ ಕಬ್ಬಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹನ್ನೂರುಕೇರಿ ಗ್ರಾಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತದಾರರಿಗೆ ಹಣ ಹಂಚುತ್ತಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹನ್ನೂರುಕೇರಿ ಗ್ರಾಮದಲ್ಲಿನ ಕಾರ್ಯಕರ್ತರೊಬ್ಬರ ಮನೆಯಲ್ಲಿ ಕುಳಿತು 2 ಸಾವಿರ ರೂ.ಮುಖಬೆಲೆಯ ನೋಟುಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದು, ಮೂವರು ಮಹಿಳಾ ಕಾರ್ಯಕರ್ತೆಯರು ಅವರೊಂದಿಗಿರುವುದು ವಿಡಿಯೋ ದೃಶ್ಯದಲ್ಲಿದೆ.

ಆದರೆ, ಈ ಆರೋಪವನ್ನು ಲಕ್ಷ್ಮೀ ಹೆಬ್ಬಾಳ್ಕರ್ ನಿರಾಕರಿಸಿದ್ದು, ತಾನು ಯಾರೊಬ್ಬರಿಗೆ ಹಣ ಹಂಚಿಕೆ ಮಾಡಿಲ್ಲ. ಬದಲಿಗೆ ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿದ್ದ ಕಾರ್ಯಕರ್ತರಿಗೆ ಊಟಕ್ಕೆ ಹಣ ನೀಡಿದ್ದೇನೆ. ಬಿಜೆಪಿ ಮುಖಂಡರು ಸೋಲಿನ ಭೀತಿಯಿಂದ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರಕಾರವು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲನ್ನು ಅರಿತು ವಾಮಮಾರ್ಗದಲ್ಲಿ ಚುನಾವಣೆ ಎದುರಿಸಲು ಮುಂದಾಗಿದೆ. ಕಾಂಗ್ರೆಸ್ ಮುಖಂಡರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ನಾವು ಮೊದಲಿನಿಂದಲೂ ಆರೋಪಿಸುತ್ತಿದ್ದೇವೆ. ಅದಕ್ಕೆ ಈಗ ಸಾಕ್ಷಿ ಸಿಕ್ಕಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ದೂರಿದ್ದಾರೆ.

ಮತದಾರರಿಗೆ ಹಣ ಹಂಚಿಕೆ ಮಾಡಿದ ಲಕ್ಷ್ಮೀಹೆಬ್ಬಾಳ್ಕರ್‌ರನ್ನು ಕೂಡಲೆ ಬಂಧಿಸಿ, ಎರಡು ಕ್ಷೇತ್ರಗಳಲ್ಲಿ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಮಧ್ಯೆಯೇ ಎರಡೂ ಕ್ಷೇತ್ರದಲ್ಲಿ ಅಲ್ಲಲ್ಲಿ ಹಣ ಮತ್ತು ಮದ್ಯ ಹಂಚಿಕೆ ಸುದ್ದಿ ಕೇಳಿಬರುತ್ತಿದ್ದು, ಚುನಾವಣಾ ಅಕ್ರಮಗಳ ನಿಯಂತ್ರಣಕ್ಕೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಘಟಾನುಘಟಿ ಮುಖಂಡರು ಕೊನೆಯ ಕ್ಷಣದಲ್ಲಿ ಅಬ್ಬರದ ಪ್ರಚಾರ ನಡೆಸಿದರು.

‘ಸಿಎಂ ಸಿದ್ದರಾಮಯ್ಯ ಕೇಂದ್ರ ಮತ್ತು ರಾಜ್ಯದ ಜನರ ತೆರಿಗೆ ಹಣ ಲೂಟಿಗೈದು ಅದನ್ನು ಮತದಾರರಿಗೆ ಹಂಚಿ ಉಪ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಇದನ್ನು ಮತದಾರರು ಅರಿತುಕೊಳ್ಳಬೇಕು. ಗುಂಡ್ಲುಪೇಟೆಯಲ್ಲಿ ಹಣ ಹಂಚಿಕೆ ಮಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು’

-ಶೋಭಾ ಕರಂದ್ಲಾಜೆ ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News