ಮೂವರಿಗೆ ಜೀವಾವಧಿ ಶಿಕ್ಷೆ

Update: 2017-04-06 17:28 GMT

ಮಡಿಕೇರಿ ಎ.6 : ವ್ಯಕ್ತಿಯೊಬ್ಬರನ್ನು ಹತ್ಯೆಗೈದಿದಲ್ಲದೆ, ನಗನಾಣ್ಯ ದೋಚಿದ ಆರೋಪ ಸಾಕ್ಷ್ಯಾಧಾರಗಳಿಂದ ಧೃಡಪಟ್ಟಿದ್ದು, ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮೂವರು ಆರೋಪಿಗಳಿಗೆ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮತ್ತಿಬ್ಬರಿಗೆ ಕಾರಾಗೃಹ ವಾಸ ಅನುಭವಿಸುವಂತೆ ಆದೇಶಿಸಿದೆ.
   ಬಾವಲಿ ಗ್ರಾಮದ ಬಿ.ಪಿ.ಕುಞ್ಞಪ್ಪ, ಕುಂಜಿಲಗೇರಿಯ ಸಿ.ಎ. ಈರಪ್ಪ ಹಾಗೂ ಬಾವಲಿಯ ಡಿ.ಎಸ್.ಅಯ್ಯಪ್ಪ ಎಂಬವರು ದಂಡ ಸಹಿತ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಬಿ.ಎ.ಪೆಮ್ಮಯ್ಯ ಹಾಗೂ ಕೆ.ವೆಂಕಟೇಶ್ ಎಂಬವರಿಗೆ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಕಿರುಂದಾಡು ಗ್ರಾಮದ ದಿನೇಶ್ ಎಂಬವರು 2014ರ ನ.4ರಂದು ಸ್ಕೂಟರ್‌ನಲ್ಲಿ ಮನೆಯತ್ತ ತೆರಳುತ್ತಿದ್ದ ವೇಳೆ ಬಿ.ಪಿ.ಕುಞ್ಞಪ್ಪನಆದೇಶದ ಮೇರೆಗೆ ಸಿ.ಇ.ಈರಪ್ಪ ಹಾಗೂ ಬಿ.ಎಸ್. ಅಯ್ಯಪ್ಪ ಎಂಬಿಬ್ಬರು ಅಡ್ಡಗಟ್ಟಿ, ದಿನೇಶ್ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದರು. ಅಲ್ಲದೆ ಆತನ ಬಳಿ ಇದ್ದ ಚಿನ್ನದ ಚೈನ್ ಮತ್ತು 25 ಸಾವಿರ ರೂ. ದೋಚಿ ಕೃತ್ಯದ ಬಗ್ಗೆ ಕುಞ್ಞಪ್ಪನಿಗೆ ಮಾಹಿತಿ ನೀಡಿದ್ದರು.


 ಈ ನಡುವೆ ಪ್ರಮುಖ ಆರೋಪಿ ಕುಞ್ಞಪ್ಪ ಪೊಲೀಸರ ವಿಚಾರಣೆಯಲ್ಲಿರುವಾಗ ತಪ್ಪಿಸಿಕೊಂಡು ಪೆಮ್ಮಯ್ಯ ಎಂಬವರ ಮನೆಯಲ್ಲಿ ಆಶ್ರಯ ಪಡೆದಿದ್ದನು. ಇದಕ್ಕೆ ವೆಂಕಟೇಶ್ ಕೂಡ ಸಹಕಾರ ನೀಡಿದ್ದನೆನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೊಕ್ಲು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಅವರು ಕೊಲೆ ಅಪರಾಧಕ್ಕಾಗಿ ಕುಂಞ್ಞಪ್ಪ, ಈರಪ್ಪ ಮತ್ತು ಅಯ್ಯಪ್ಪ ಅವರಿಗೆ ಜೀವಾವಧಿ ಶಿಕ್ಷೆ , ತಲಾ 20 ಸಾವಿರ ರೂ.ದಂಡ, ನಗನಾಣ್ಯ ಅಪಹರಿಸಿದ್ದಕ್ಕಾಗಿ 7ವರ್ಷಗಳ ಕಾರಾಗೃಹ ಶಿಕ್ಷೆ, ಮೂರು ಸಾವಿರ ರೂ.ದಂಡ, ಪರಾರಿಯಾಗಿದ್ದಕ್ಕಾಗಿ 2 ವರ್ಷಗಳ ಕಠಿಣ ಸಜೆ, 2 ಸಾವಿರ ರೂ. ದಂಡ, ದಾರಿ ತಡೆದಿದ್ದಕ್ಕಾಗಿ 1 ವರ್ಷ ಶಿಕ್ಷೆ, 500 ರೂ. ದಂಡ ವಿಧಿಸಿದ್ದಾರೆ.
         ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ಪೆಮ್ಮಯ್ಯ ಮತ್ತು ವೆಂಕಟೇಶ್‌ಗೆ 2 ತಿಂಗಳ ಶಿಕ್ಷೆ 150 ರೂ. ದಂಡ, ಅಲ್ಲದೆ ಕೃತ್ಯ ಎಸಗಲು ಕೋವಿ ನೀಡಿದ್ದಕ್ಕಾಗಿ ಸಿ.ಎ.ಈರಪ್ಪನಿಗೆ 3 ವರ್ಷ ಶಿಕ್ಷೆ, 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News