×
Ad

ಮುಖ್ಯಮಂತ್ರಿ ಭರವಸೆ ಹಿನ್ನೆಲೆಯಲ್ಲಿ 'ಕಾಲ್ನಡಿಗೆ ಜಾಥ' ಕೈ ಬಿಟ್ಟ ಹೋರಾಟಗಾರರು

Update: 2017-04-07 18:32 IST

ಮಡಿಕೇರಿ ಏ.7 : ದಿಡ್ಡಳ್ಳಿಯ ನಿರಾಶ್ರಿತ ಗಿರಿಜನರಿಗೆ ಅವರಿರುವ ಸ್ಥಳದಲ್ಲೆ ಜಾಗ ಒದಗಿಸಬೇಕೆಂದು ಆಗ್ರಹಿಸಿ ಆರಂಭಿಸಿದ್ದ ದಿಡ್ಡಳ್ಳಿಯಿಂದ ಬೆಂಗಳೂರು ಕಾಲ್ನಡಿಗೆ ಜಾಥವನ್ನು ಮುಖ್ಯಮಂತ್ರಿಗಳ ಭರವಸೆಯ ಹಿನ್ನೆಲೆಯಲ್ಲಿ ಗಿರಿಜನ ಮುಖಂಡರು ಹಾಗೂ ಹೋರಾಟಗಾರರು ಮೊಟಕುಗೊಳಿಸಿದ್ದಾರೆ.

ದಿಡ್ಡಳ್ಳಿ ಹಾಗೂ ಜಿಲ್ಲೆಯ ವಿವಿಧೆಡೆಗಳ ನಿವೇಶನ ರಹಿತರು ದಿಡ್ಡಳ್ಳಿಯಿಂದ ಇಂದು ಪೂರ್ವಾಹ್ನ ಪೂರ್ವ ನಿರ್ಧರಿತವಾದಂತೆ ಚೆಂಡೆ ವಾದ್ಯಗಳನ್ನು ಬಾರಿಸಿ, ಕ್ರಾಂತಿ ಗೀತೆಗಳನ್ನು ಮೊಳಗಿಸುವ ಮೂಲಕ ಬೆಂಗಳೂರಿನತ್ತ ಕಾಲ್ನಡಿಗೆ ಜಾಥ ಆರಂಭಿಸಿದ್ದರು.

ಜಾಥದ ನೇತೃತ್ವವನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪ್ರಮುಖರಾದ ಎ.ಕೆ ಸುಬ್ಬಯ್ಯ, ಗೌರಿ ಲಂಕೇಶ್, ಸಿರಿಮನೆ ನಾಗರಾಜ್, ಅಮಿನ್ ಮೊಹಿಸಿನ್, ನೇಮಿಚಂದ್, ಜೆ.ಕೆ ಅಪ್ಪಾಜಿ, ಮುತ್ತಮ್ಮ, ಸ್ವಾಮಿಯಪ್ಪ ವಹಿಸಿಕೊಂಡಿದ್ದರು.

ಮೊಟಕುಗೊಂಡ ಜಾಥ:

ಬೆಳಗ್ಗೆ ಆರಂಭಗೊಂಡ ಜಾಥದಲ್ಲಿ ಸಮಿತಿಯ ಪ್ರಮುಖರು ನೂರಾರು ಗಿರಿಜನರು ಕಾಲ್ನಡಿಗೆಯ ಮೂಲಕ ಮಾಲ್ದಾರೆ ಮಾರ್ಗವಾಗಿ ಕ್ರಾಂತಿ ಗೀತೆಗಳನ್ನು ಮೊಳಗಿಸುತ್ತಾ ಹೆಜ್ಜೆಯನ್ನು ಹಾಕಿದ್ದರು. ಜಾಥ ಮಾಲ್ದಾರೆ ಅರಣ್ಯದಂಚಿನ ಮುತ್ತೂರು ಗ್ರಾಮಕ್ಕೆ ಬರುವಷ್ಟರಲ್ಲಿ ಮುಖ್ಯ ಮಂತ್ರಿಗಳು ಏ.11 ರಂದು ಸಮಿತಿಯ ಪ್ರಮುಖರು, ಹೋರಾಟಗಾರರನ್ನು ಒಳಗೊಂಡಂತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಿದ್ದಾರೆನ್ನುವ ಆಶ್ವಾಸನೆ ದೊರಕಿತ್ತು. ಈ ಹಿನ್ನೆಲೆಯಲ್ಲಿ ಸಮಿತಿಯ ಪ್ರಮುಖರು ಹೋರಾಟವನ್ನು ಮೊಟಕು ಗೊಳಿಸಿ ಮರಳಿ ದಿಡ್ಡಳ್ಳಿಯತ್ತ ಹೆಜ್ಜೆ ಹಾಕಿದ್ದರು.

 ಸಮರ್ಪಕ ಜಾಗ ದೊರಕುವವರೆಗೆ ಹೋರಾಟ-ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ನಿರ್ವಾಣಪ್ಪ, ಆದಿವಾಸಿಗಳಿಗೆ ಒಂದೇ ಜಾಗದಲ್ಲಿ ನಿವೇಶನ ನೀಡಬೇಕು. ಈಗ ಸರಕಾರ ಅವೈಜ್ಞಾನಿಕವಾಗಿ ಗುರುತಿಸಿರುವ ಜಾಗಕ್ಕೆ ಆದಿವಾಸಿಗಳು ತೆರಳುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಕಾರ್ಯದರ್ಶಿ ಮುಖಾಂತರ ಏ.11 ರಂದು ಸಭೆ ಕರೆದಿದ್ದು, ಸಭೆಯಲ್ಲಿ ಶಾಶ್ವತ ಸೂರು ಒದಗಿಸುವ ಬಗ್ಗೆ ಭರವಸೆ ದೊರಕಿದೆ.ಆದರೆ, ಸಮರ್ಪಕ ಜಾಗ ನೀಡುವವರೆಗೂ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಆದಿವಾಸಿಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ:

ಶುಕ್ರವಾರ ಬೆಳಗ್ಗೆ ಆದಿವಾಸಿಗಳ ಕಾಲ್ನಡಿಗೆ ಜಾಥವನ್ನು ಉದ್ಘಾಟಿಸಿದ ಜನಪರ ಹೋರಾಟಗಾರ ಜಿಘ್ನೇಶ್ ಮೇವಾನಿ, ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದ ಆದಿವಾಸಿಗಳನ್ನು ಪೊಲೀಸ್ ಹಾಗೂ ಅರಣ್ಯ ಇಲಾಖೆ ರಾತ್ರೋ ರಾತ್ರಿ ದೌರ್ಜನ್ಯವೆಸಗಿ ತೆರವುಗೊಳಿಸಿದ್ದು ಅಮಾನವೀಯ. ಗಿರಿಜನರ ಗುಡಿಸಲುಗಳನ್ನು ಕೆಡವಿರುವುದರ ಹಿಂದೆ ಕಾಫಿ ಬೆಳೆಗಾರರ ಹಾಗೂ ಬಿ.ಜೆ.ಪಿ-ಕಾಂಗ್ರೆಸ್ ಪಕ್ಷದ ಕೈವಾಡ ಇದೆ ಎಂದು ಆರೋಪಿಸಿದರು.

 ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆದಿವಾಸಿಗಳಿಗೆ ಒಂದು ತುಂಡು ಭೂಮಿಯನ್ನು ನೀಡಿ ಶಾಶ್ವತ ಸೂರು ಒದಗಿಸದಿರುವುದು ಖಂಡನೀಯ. ಭೂ ಬ್ಯಾಂಕ್ ಅಧೀನದಲ್ಲಿ ಲಕ್ಷಾಂತರ ಏಕರೆ ಭೂಮಿ ಇದ್ದು, ಆದಿವಾಸಿಗಳಿಗೆ ಹಾಗೂ ದಲಿತರಿಗೆ ವಿತರಿಸಲು ಸರಕಾರ ಮೀನಾಮೇಷ ಎಣಿಸುತ್ತಿದೆ. ಆದರೆ, ಅದೇ ಭೂಮಿಯನ್ನು ಇತರೆ ಭೂ ಮಾಫಿಯಾಗಳಿಗೆ ನೀಡಲು ಸರಕಾರ ತಯಾರಿ ಇದೆ ಎಂದು ವ್ಯಂಗ್ಯವಾಡಿದರು.

ಕಾಲ್ನಡಿಗೆ ಜಾಥ ಸಂದರ್ಭ ಮಡಿಕೇರಿ ಡಿ.ವೈ.ಎಸ್.ಪಿ. ಛಬ್ಬಿ, ವೃತ್ತ ನಿರೀಕ್ಷಕ ಮೇದಪ್ಪ, ಸಿದ್ದಾಪುರ ಠಾಣಾಧಿಕಾರಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News