×
Ad

" ಭಯೋತ್ಪಾದನಾ ರಾಜಕೀಯದ ವಿರುದ್ಧ ಒಂದಾಗೋಣ " ಎಸ್ ಡಿಪಿಐ ಯಿಂದ ರಾಷ್ಟ್ರೀಯ ಅಭಿಯಾನ

Update: 2017-04-07 19:00 IST

ಬೆಂಗಳೂರು, ಎ. 7: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ 'ಭಯೋತ್ಪಾದನಾ ರಾಜಕೀಯದ ವಿರುದ್ಧ ಒಂದಾಗೋಣ' ಎಂಬ ರಾಷ್ಟ್ರೀಯ ಅಭಿಯಾನದ ಉದ್ಘಾಟನಾ ಸಮಾರಂಭವನ್ನು ಎ.8 ರಂದು ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಜನರು ಅಭದ್ರತೆ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದು, ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಕೋಮುವಾದಿ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿ-ಯುವಜನರನ್ನು ಕೋಮುವಾದದ ವಿಷ ಬೀಜ ಬಿತ್ತಿ ಚುನಾವಣೆಗಳ ಗಾಳದ ವಸ್ತುಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚಿಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಜೆಪಿ ಕೋಮು ಧ್ರುವೀಕರಣ, ಕೋಮುದ್ವೇಷ ಹರಡುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಮತಗಳನ್ನು ಪಡೆದುಕೊಂಡಿದೆ. ಅಲ್ಲದೆ, 10 ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಿರುವ ಮಠದ ಮುಖ್ಯಸ್ಥರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಅವರು ಆರೋಪಿಸಿದರು.

ಉತ್ತರ ಪ್ರದೇಶದಲ್ಲಿ ಆದಿತ್ಯನಾಥ ಮುಖ್ಯಮಂತ್ರಿಯಾದ ನಂತರ ಯಾವುದೇ ಸೂಕ್ತ ವಿಚಾರಣೆ ನಡೆಸದೇ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಲಾಗುತ್ತಿದ್ದು, ಬಲವಂತವಾಗಿ ಅಲ್ಪಸಂಖ್ಯಾತರ ದುಡಿಮೆಯ ಮೇಲೆ ದಾಳಿ ಮಾಡಲಾಗುತ್ತಿದೆ. ಆ ಮೂಲಕ ಬಡವರ ಆಹಾರದ ಹಕ್ಕನ್ನು ಕಸಿಯಲು ಬಿಜೆಪಿ ಸರಕಾರ ಮುಂದಾಗಿದೆ. ಇದೇ ವೇಳೆ ಎನ್‌ಡಿಎ ಸರಕಾರ ಅಧಿಕಾರ ಬಂದ ನಂತರ ದೇಶದ ವಿವಿಧ ಭಾಗಗಳಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ದಾಳಿ, ಹಲ್ಲೆ ಮಾಡುವುದು, ಭಯದ ವಾತಾವರಣ ನಿರ್ಮಿಸುವುದು ಸಾಮಾನ್ಯವಾಗಿದ್ದರೂ, ಚುನಾವಣೆಗಳ ನಂತರ ಅದು ವಿಕಾರ ರೂಪ ಪಡೆದುಕೊಂಡಿದೆ ಎಂದು ಅವರು ಕಿಡಿಕಾರಿದರು.

ಭೋಪಾಲ್ ಹಾಗೂ ಲಕ್ನೋದಲ್ಲಿ ನಡೆದ ಎನ್‌ಕೌಂಟರ್ ಜನತೆಯ ಮನಸ್ಸಿನಲ್ಲಿ ಭಯ ಹಾಗೂ ಅಪನಂಬಿಕೆಗಳನ್ನು ಹುಟ್ಟುಹಾಕಿದೆ. ಮಾನವ ಹಕ್ಕುಗಳ ಆಯೋಗ ನೀಡುವ ವರದಿಗಳನ್ನು ತಿರುಚಿ ನ್ಯಾಯಾಂಗದ ದಿಕ್ಕು ತಪ್ಪಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಅಮಾಯಕರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ ಜೈಲಿಗೆ ಕಳಿಸಲಾಗುತ್ತಿದೆ. ಭಯೋತ್ಪಾದಕರೊಂದಿಗೆ ಸಂಪರ್ಕವಿರುವ ಬಿಜೆಪಿ ಮುಖಂಡರ ಜಾಲ ಸಿಕ್ಕಿ ಬಿದ್ದರೂ ಕ್ರಮ ಕೈಗೊಳ್ಳದೆ ರಕ್ಷಿಸಲಾಗಿದೆ. ಯುಎಪಿಎ ಮತ್ತು ಎಎಫ್‌ಪಿಎ ಕರಾಳ ಕಾನೂನು ಜಾರಿ ಮಾಡಿ ಧಾರ್ಮಿಕ ಹಾಗೂ ಪ್ರಾದೇಶಿಕ ತಾರತಮ್ಯ ಹೇರಲು ಮುಂದಾಗಿರುವುದು ಖಂಡನೀಯ ಎಂದು ಅವರು ಆರೋಪಿಸಿದರು.

ಕೋಮುವಾದ, ಹಿಂಸೆ ಹಾಗೂ ಮತಾಂಧ ಯಜಮಾನಿಕೆ ವಿರುದ್ಧ ಸಮಾನತೆ, ಸಹೋದರತೆ ಹಾಗೂ ವಿಶಾಲ ಮನಸ್ಥಿತಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಾನವೀಯ ವೌಲ್ಯಗಳನ್ನು ಪ್ರಚಾರ ಮಾಡುವ ಸಲುವಾಗಿ ಭಯೋತ್ಪಾದನಾ ರಾಜಕೀಯ ವಿರುದ್ಧ ಎಲ್ಲರೂ ಒಂದಾಗೋಣ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಪೊಲೀಸರ ಲಾಠಿ ಪ್ರಹಾರಕ್ಕೆ ಖಂಡನೆ:

ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಸಂಘ ಪರಿವಾರದವರು ಹೆಚ್ಚಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಮಂಗಳೂರಿನಲ್ಲಿ ವಿಚಾರಣೆ ಹೆಸರಿನಲ್ಲಿ 6-7 ಯುವಕರನ್ನು ಬಂಧಿಸಿ ಬರ್ಬರವಾಗಿ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ಖಂಡನೀಯ. ಇದನ್ನು ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಪ್ರಹಾರ ನಡೆಸಿ, ಸುಳ್ಳು ಕೇಸ್‌ಗಳನ್ನು ದಾಖಲಿಸಿರುವುದು ನೋಡಿದರೆ ನಾವಿಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೀವಾ ಎಂಬ ಅನುಮಾನ ಮೂಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News