ರಾಜ್ಯ ಹೆದ್ದಾರಿಗಳನ್ನಾಗಿಸಲು ಆಗ್ರಹ: ಎ.20ಕ್ಕೆ ಮದ್ಯಮಾರಾಟ ಬಂದ್
ಬೆಂಗಳೂರು, ಎ.7: ಕರ್ನಾಟಕ ಅಬಕಾರಿ ನಿಯಮ 5 ತಿದ್ದುಪಡಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎ.20ರಂದು ರಾಜ್ಯವ್ಯಾಪಿ ಮದ್ಯಮಾರಾಟ ಬಂದ್ ಮಾಡಲು ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘ ನಿರ್ಧರಿಸಿದೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶೀಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಗುರುಸ್ವಾಮಿ, ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದಾಗಿ ಕರ್ನಾಟಕ ವ್ಯಾಪ್ತಿಯ 6,018 ಪರವಾನಿಗೆ ರದ್ದಾಗಲಿವೆ. ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗಲಿವೆ. ಇದನ್ನು ತಪ್ಪಿಸಲು ರಾಜ್ಯ ಸರಕಾರ ಕರ್ನಾಟಕ ಅಬಕಾರಿ ನಿಯಮ 5ಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಪರಿವರ್ತನೆ ಮಾಡಬೇಕು. ಮದ್ಯದ ಅಂಗಡಿಗಳ ಪರವಾನಿಗೆಗಳನ್ನು ಸೆ.30ವರೆಗೆ ವಿಸ್ತರಿಸಬೇಕು. ಪ್ರಮುಖವಾಗಿ ಸುಪ್ರೀಂಕೋರ್ಟ್ ಆದೇಶ ಪರಿಷ್ಕರಣೆಗೆ ಕೇಂದ್ರಕ್ಕೆ ರಾಜ್ಯ ಸರಕಾರ ಮನವಿ ಮಾಡಬೇಕು ಎಂದು ಆಗ್ರಹಿಸಿದರು.
ಎ.20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ನಡೆಸುವುದಲ್ಲದೆ, ನಗರದ ವೌರ್ಯ ವೃತ್ತದಿಂದ ಮುಖ್ಯಮಂತ್ರಿ ನಿವಾಸದವರೆಗೆ ಜಾಥಾ ನಡೆಸಲಾಗುವುದು ಎಂದ ಅವರು, ಎ.15ರಿಂದ 18ರವರೆಗೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮದ್ಯಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ನೆಹರ್‌ವಾಡೆ, ರಮೇಶ್ ಸಾಲಗಾರ್ ಮತ್ತಿತರರು ಉಪಸ್ಥಿತರಿದ್ದರು.