×
Ad

ದೇವರ ದಾಸಿಮಯ್ಯ ವಚನಕಾರ ಅಲ್ಲ: ಎಂ.ಚಿದಾನಂದಮೂರ್ತಿ

Update: 2017-04-07 21:52 IST

ಬೆಂಗಳೂರು, ಎ.7: ವಚನಕಾರರಲ್ಲದ ದೇವರ ದಾಸಿಮಯ್ಯರ ಜಯಂತಿಯನ್ನು ವಚನಕಾರ ಎಂದು ವೈಭವೀಕರಿಸಿ ಸರಕಾರ ಆಚರಣೆ ಮಾಡಿರುವುದು ಖಂಡನೀಯ ಎಂದು ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಕಾಲದ ವ್ಯಕ್ತಿಗಳಾಗಿದ್ದು, ಪ್ರಾಚೀನ ದಾಖಲೆಗಳ ಪ್ರಕಾರ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಜಯಸಿಂಹನ ಪತ್ನಿಯ ಗುರುವಾಗಿದ್ದಾರೆ. ಅವರು ಹುಟ್ಟಿನಿಂದ ನೇಕಾರರಲ್ಲ. ಅವರು ಧ್ಯಾನ, ಬೋಧನೆಗಳನ್ನು ಕಾಯಕವನ್ನಾಗಿಸಿಕೊಂಡಿದ್ದ ಬ್ರಹ್ಮಚಾರಿಯಾಗಿದ್ದ. ಕನ್ನಡ ಅಥವಾ ಸಂಸ್ಕೃತದಲ್ಲಿ ಯಾವುದೇ ಒಂದು ಕೃತಿಯನ್ನು ಅವರು ರಚಿಸಿಲ್ಲ ಎಂದು ಚಿದಾನಂದ ಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಾಸಿಮಯ್ಯನ ಹೆಸರೇ ಸೂಚಿಸುವಂತೆ ಜೇಡ ಅಥವಾ ನೇಯ್ಗೆ ವೃತ್ತಿಯ ಸಂಸಾರಿ. ಅವರು ಇಂದಿನ ಯಾದಗಿರಿ ಜಿಲ್ಲೆಯ ಮುದೇನೂರಿನಲ್ಲಿ ಜನಿಸಿದ್ದರಿಂದ ಅಲ್ಲಿನ ಆದಿ ದೈವ ರಾಮನಾಥನ ಹೆಸರನ್ನು ಅಂಕಿತ ಮಾಡಿಕೊಂಡು ಹಲವು ವಚನಗಳು ರಚಿಸಿದ್ದಾನೆ ಎಂದ ಅವರು, ಹನ್ನರಡನೇ ಶತಮಾನದಲ್ಲಿ ಶರಣ ಚಳವಳಿ ಸ್ತ್ರೀ-ಪುರುಷ ಸಮಾನತೆಯ ಸ್ಪಷ್ಟ ನಿದರ್ಶನ ಇವರಾಗಿದ್ದಾರೆ ಎಂದರು.

ಹೀಗಾಗಿ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯರ ನಡುವೆ ಸುಮಾರು 120 ವರ್ಷಗಳಷ್ಟು ಅಂತರವಿದ್ದರೂ, ರಾಜ್ಯ ಸರಕಾರ ಅನಗತ್ಯವಾಗಿ ದೇವರ ದಾಸಿಮಯ್ಯನನ್ನು ವಚನಕಾರ ಎಂದು ಬಿಂಬಿಸುತ್ತಿರುವುದು ಮೂರ್ಖತನದ ಪರಮಾಧಿಕಾರ. ಸಚಿವೆ ಉಮಾಶ್ರೀ ನೇಕಾರ ವರ್ಗಕ್ಕೆ ಸೇರಿದ್ದರೂ, ಜೇಡರ ದಾಸಿಮಯ್ಯರನ್ನು ಅಲಕ್ಷಿಸಿ ದೇವರ ದಾಸಿಮಯ್ಯ ವಚನಕಾರ ಎಂದು ವೈಭವೀಕರಿಸುತ್ತಿರುವುದು ತೀವ್ರ ಖಂಡನೀಯ. ಆದುದರಿಂದ ಸರಕಾರ ದೇವರ ದಾಸಿಮಯ್ಯ ಜನ್ಮದಿನಾಚರಣೆ ಮಾಡಲಿ, ಆದರೆ, ವಚನಕಾರ ಎಂದು ಬಿಂಬಿಸಬಾರದು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News