ತಹಶೀಲ್ದಾರ್ ಎದುರು ರೈತ ಆತ್ಮಹತ್ಯೆಗೆ ಯತ್ನ
ಗದಗ,ಎ.7: ಅಕ್ರಮ ಸಾಗುವಳಿ ಜಮೀನನ್ನು ವಶಪಡಿಸಿಕೊಳ್ಳಲು ತೆರಳಿದ್ದ ತಹಶೀಲ್ದಾರ್‌ಎದುರೇ, ಅದಕ್ಕೆ ವಿರೋಧ ವ್ಯಕ್ತಪಡಿಸಿ, ರೈತ ಮತ್ತು ಆತನ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರನ್ನು ಕೊರ್ಲಹಳ್ಳಿ ಗ್ರಾಮದ ರೈತ ಲಿಯಾಖತ್ ಅಲಿ ಬಳ್ಳಾರಿ (65) ಹಾಗೂ ಮಗಳು ಮೈಬುನ್ನಿಸಾ ಬಳ್ಳಾರಿ (32) ಎಂದು ಗುರುತಿಸಲಾಗಿದೆ. ಲಿಯಾಖತ್ ಅಲಿ ಬಳ್ಳಾರಿ ಅವರ ಕುಟುಂಬವು 1965ರಿಂದ ಈ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದರು. 2001ರವರೆಗೆ ಕಂದಾಯವನ್ನೂ ಸಲ್ಲಿಸಿದ್ದಾರೆ. ಆದರೆ, ಪರಿಶೀಲನೆಯಲ್ಲಿ ತನ್ನ ಭೂಮಿಯು ಸರಕಾರಕ್ಕೆ ಸೇರಿದ್ದು ಎಂದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ, ನಿಯಮಾನುಸಾರ ತಹಶೀಲ್ದಾರ್ ಜಮೀನು ವಶಕ್ಕೆ ಪಡೆದುಕೊಳ್ಳಲು ಬಂದಿದ್ದರು.
ಬದುಕಿಗಾಗಿ ಇರುವ ಜಮೀನನ್ನೆ ಸರಕಾರ ಕಸಿದುಕೊಳ್ಳಲು ಮುಂದಾಗಿದ್ದು ಕಂಡು ನೊಂದ ರೈತ ಅಲಿ ಮತ್ತು ಆತನ ಮಗಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ತಮ್ಮ ತಂದೆ ಹಾಗೂ ಸಹೋದರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ತಾಲೂಕು ಆಡಳಿತವೇ ಕಾರಣ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.