ರಾಜಕಾರಣಿಗಳೇ ಪತ್ರಿಕೆ, ಚಾನಲ್‌ಗಳ ಒಡೆಯರಾಗುತ್ತಿದ್ದಾರೆ: ದಿನೇಶ್ ಅಮೀನ್ ಮಟ್ಟು ವಿಷಾದ

Update: 2017-04-08 11:25 GMT

ಶಿವಮೊಗ್ಗ, ಏ. 8: 'ಪ್ರಸ್ತುತ ರಾಜಕಾರಣಿಗಳೇ ಪತ್ರಿಕೆ, ಚಾನಲ್‌ಗಳ ಒಡೆಯರಾಗುತ್ತಿದ್ದಾರೆ. ಇಂತಹ ಪತ್ರಿಕೆ, ಚಾನಲ್‌ಗಳಿಂದ ಯಾವ ರೀತಿ ಅಭಿವ್ಯಕ್ತಿ ಸ್ವಾತಂತ್ರ್ಯದ ನಿರೀಕ್ಷೆ ಮಾಡಲು ಸಾಧ್ಯವಾಗುತ್ತದೆ?' ಎಂದು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ, ಪ್ರಗತಿಪರ ಚಿಂತಕ ದಿನೇಶ್ ಅಮೀನ್ ಮಟ್ಟು ಪ್ರಶ್ನಿಸಿದ್ದಾರೆ.

ನಗರದ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ದಕ್ಷಿಣಾಯಣ ಚಳವಳಿಯ ಬರಹಗಾರರ, ಚಿಂತಕರ ಅಭಿವ್ಯಕ್ತಿ ಸಮಾವೇಶದ ಗೋಷ್ಠಿಯೊಂದರಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಹಿಂದೆ ಪ್ರಭುತ್ವ, ಉದ್ಯಮಿಗಳು ಪರೋಕ್ಷವಾಗಿ ಮಾಧ್ಯಮಗಳ ನಿಯಂತ್ರಣ ಮಾಡುತ್ತಿದ್ದವು. ಇದೀಗ ನೇರವಾಗಿಯೇ ನಿಯಂತ್ರಣ ಮಾಡಲಾರಂಭಿಸಿದ್ದಾರೆ. ಮಾಧ್ಯಮ ಸಂಸ್ಥೆಗಳನ್ನೇ ಖರೀದಿ ಮಾಡಲಾಗುತ್ತಿದೆ. ರಿಲೆಯನ್ಸ್ ಸಂಸ್ಥೆಯು ಸುಮಾರು 5,000 ಕೋಟಿ ರೂ.ಗಳನ್ನು ಮಾಧ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ ಎಂದರು.

ಪತ್ರಿಕೆಗಳಿಗೆ ಓದುಗರೇ ಒಡೆಯರಾಗಬೇಕು. ಆದರೆ ಇಂದಿನ ಪತ್ರಿಕೆಗಳಿಗೆ ಓದುಗರು ಬೇಕಾಗಿಲ್ಲ. ಕೇವಲ ಗ್ರಾಹಕರು ಬೇಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಭಾರೀ ದೊಡ್ಡ ಸಂಖ್ಯೆಯಲ್ಲಿ ಪ್ರಸರಣ ಹೊಂದಲು ಇಚ್ಚಿಸುವ ಇಂಗ್ಲಿಷ್ ಪತ್ರಿಕೆಗಳು ಗ್ರಾಮೀಣ ಭಾಗದಲ್ಲಿ ಪ್ರಸರಣ ಸಂಖ್ಯೆ ಹೆಚ್ಚಿಸಲು ಆಸಕ್ತಿವಹಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ತಾವು ಪತ್ರಿಕೋದ್ಯಮಕ್ಕೆ ಕಾಲಿಟ್ಟ ವೇಳೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಂದಿರಾ ಗಾಂಧಿ ಬಹುದೊಡ್ಡ ಶತೃ ಎಂದು ಭಾವಿಸಿದ್ದೆ. ಆದರೆ ಕಾಲಾನಂತರ ಅವರಲ್ಲ ಎಂಬುವುದರ ಅರಿವಾಯಿತು. ಇದೀಗ ಅಭಿವ್ಯಕ್ತಿ ಸ್ವಾತಂತ್ರ್ಯ ಮಟ್ಟ ಹಾಕುವ ಶಕ್ತಿಗಳು ಒಳಗೊಳಗೆ, ನಮ್ಮ ಸುತ್ತಮುತ್ತಲೇ ಕೆಲಸ ಮಾಡುತ್ತಿವೆ ಎಂದರು.

ಆತ್ಮಹತ್ಯೆ:

ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ ಎಂಬುವುದಕ್ಕಿಂತ ಆತ್ಮಹತ್ಯೆಯಾಗುತ್ತಿದೆ ಎಂಬುವುದು ಪ್ರಸ್ತುತ ಸಂದರ್ಭಕ್ಕೆ ಸೂಕ್ತವಾಗಿದೆ. ಅದೆಷ್ಟೊ ಜನ ಸಜ್ಜನರು, ವಿಚಾರವಾದಿಗಳು ಯಾಕೆ ಮಾತನಾಡುತ್ತಿಲ್ಲವೆಂಬುವುದು ಗೊತ್ತಾಗುತ್ತಿಲ್ಲವಾಗಿದೆ. ಮಾತನಾಡಲು ಆಗುತ್ತಿರುವ ಭಯವೇಕೆ ಎಂಬುವುದೇ ಗೊತ್ತಾಗುತ್ತಿಲ್ಲವಾಗಿದೆ.

ನಮ್ಮ ಹೋರಾಟ ದುರ್ಜನರ ವಿರುದ್ದಕ್ಕೆ ಬದಲಾಗಿ ನಮ್ಮೊಳಗಿರುವ ಸಜ್ಜನರ ವಿರುದ್ದ ನಡೆಸಬೇಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಆತ್ಮಹತ್ಯೆ ತಡೆಗೆ ಪರಿಹಾರವೇನು ಎಂಬುವುದರ ಬಗೆಗೆ ಚಿಂತಿಸಬೇಕಾಗಿದೆ. ಒಳಗಿನ ಶತೃಗಳ ಬಗ್ಗೆ ಆತ್ಮಾವಲೋಕನ ನಡೆಸಬೇಕಾಗಿದೆ ಎಂದು ಹೇಳಿದರು.

ರಾಜಕೀಯ ಆಯ್ಕೆಗಳ ಬಗ್ಗೆ ಸ್ಪಷ್ಟವಾಗಬೇಕು

’ರಾಜಕೀಯ ಆಯ್ಕೆಗಳ ಬಗ್ಗೆ ಸ್ಪಷ್ಟವಾಗಬೇಕು. ಯಾರ ಜೊತೆ ನಿಲ್ಲಬೇಕು. ಯಾಕೆ ನಿಲ್ಲಬೇಕು. ಎಂಬುವುದರ ಕ್ಲಾರಿಟಿ ಇರಬೇಕಾಗಿದೆ. ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ನಡೆಸಬೇಕಾಗಿದೆ. ಯುವ ಹೋರಾಟಗಾರರು, ಬರಹಗಾರರನ್ನು ಹಿರಿಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಎಂದಿಗೂ ಕಡೆಗಣಿಸುವ ಕೆಲಸ ಮಾಡುತ್ತಿಲ್ಲ. ಯುವ ಹೋರಾಟಗಾರರು, ಬರಹಗಾರರೇ ಪ್ರಸ್ತುತ ನಮ್ಮ ನಾಯಕರಾಗಿದ್ದಾರೆ’ ಎಂದು ಲೇಖಕಿ ಡಾ. ಹೆಚ್. ಎಸ್. ಅನುಪಮಾ ಅಭಿಪ್ರಾಯಪಟ್ಟರು.

ಬಂಡವಾಳಶಾಹಿ ಜೊತೆಗೂಡಿ ಅಧಿಕಾರಕ್ಕೆ ಬರುತ್ತಿರುವ ಫ್ಯಾಸಿಸಂ ಶಕ್ತಿಗಳು: ಚಿಂತಕ ಡಾ. ಗಣೇಶ ದೇವಿ 

’ದೇಶದಲ್ಲಿ ಫ್ಯಾಸಿಸಂ ಶಕ್ತಿಗಳು ಬಂಡವಾಳಶಾಹಿಗಳ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ’ ಎಂದು ದಕ್ಷಿಣಾಯಣ ಕರ್ನಾಟಕದ ರೂವಾರಿ, ಚಿಂತಕ ಡಾ. ಗಣೇಶ ದೇವಿ ತಿಳಿಸಿದ್ದಾರೆ.

ನಗರದ ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ದಕ್ಷಿಣಾಯಣ ಚಳವಳಿಯ ಬರಹಗಾರರ, ಚಿಂತಕರ ಅಭಿವ್ಯಕ್ತಿ ಸಮಾವೇಶ ಉದ್ಘಾಟಿಸಿದ ನಂತರಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಜನಮತ ಆಧಾರಿತವಾಗಿ ಅಧಿಕಾರಕ್ಕೆ ಬಂದ ಪ್ರಭುತ್ವಗಳು ಪ್ರಸ್ತುತ ಸರ್ವಾಧಿಕಾರಿ ಪ್ರಭುತ್ವಗಳಾಗಿ ಬದಲಾಗುತ್ತಿವೆ. ಎಲ್ಲರನ್ನೂ ಒಳಗೊಳ್ಳುವಿಕೆಯಿಂದ ವಿಮುಖಗೊಳ್ಳುತ್ತಿವೆ. ಟರ್ಕಿ, ಈಜಿಪ್ಟ್ ದೇಶಗಳಲ್ಲಿ ಸರ್ವಾಧಿಕಾರಿ ಪ್ರಭುತ್ವ ವ್ಯವಸ್ಥೆ ಕಾಣುತ್ತಿದ್ದೆವೆ. ಇಂತಹ ಸರ್ವಾಧಿಕಾರಿ ಪ್ರಭುತ್ವದ ಪ್ರಕ್ರಿಯೆ ಭಾರತದಲ್ಲಿ ಗುಜರಾತ್ ರಾಜ್ಯದಿಂದ ಆರಂಭವಾಗಿದೆ. ಇದೀಗ ಈ ಪ್ರಭುತ್ವ ಇಡೀ ಭಾರತಾದ್ಯಂತ ವ್ಯಾಪಕವಾಗಿ ವಿಸ್ತಾರವಾಗುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ ಎಂದು ಹೇಳಿದರು.

ಒಂದೇ ಕಡೆ ಅಧಿಕಾರ ಕೇಂದ್ರೀಕೃತವಾದಾಗ ಅಪಾಯ ಎದುರಾಗುತ್ತದೆ. ಆದ್ದರಿಂದ ವಿಕೇಂದ್ರೀಕೃತ, ನಿರ್ಭೀತ ಮತ್ತು ಆರೋಗ್ಯಕರ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವುದು ಇಂದಿನ ತುರ್ತು ಅವಶ್ಯಗಳಲ್ಲೊಂದಾಗಿದೆ ಎಂದರು.

ಸಕ್ರಿಯ ಚಳುವಳಿ:

ಜನರನ್ನು ಭಯಭೀತರನ್ನಾಗಿಸುವುದು, ಸುಳ್ಳುಗಳನ್ನು ವ್ಯವಸ್ಥಿತವಾಗಿ ಹರಡುವುದು, ದೊಡ್ಡ ಮುಖವಾಡದ ಹಿಂದೆ ಸಣ್ಣಮುಖವಿರುವಂತೆ ಅಭಿವೃದ್ದಿಯ ಸುಳ್ಳು ಭರವಸೆಗಳನ್ನು ನೀಡುವುದು ಸರ್ವಾಧಿಕಾರಿ ಪ್ರಭುತ್ವದ ಗೌಪ್ಯ ಅಜೆಂಡವಾಗಿದೆ. ಇಂತಹ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಸಲು ದಕ್ಷಿಣಾಯಣ ಹೊರಟಿದೆ.

ದಕ್ಷಿಣಾಯಣ ಚಳವಳಿಯು ಸಾಂಸ್ಕೃತಿಕವಾಗಿ ದೇಶವನ್ನು ಕಟ್ಟುವ ಚಳವಳಿಯಾಗಿದೆ. 12 ರಾಜ್ಯಗಳಲ್ಲಿ ಈ ಚಳುಚಳಿ ಸಕ್ರೀಯವಾಗಿದೆ. ಇದು ಯಾವ ಪಕ್ಷದ ಪರ ಮತ್ತು ವಿರುದ್ದವಲ್ಲ. ಫ್ಯಾಸಿಸ್ಟ್ ಸಂಘಟನೆಗಳ ವಿರುದ್ಧ ಹೋರಾಡುವುದು, ಪ್ರಜಾಪ್ರಭುತ್ವ ರಕ್ಷಣೆ ಇದರ ಉದ್ದೇಶವಾಗಿದೆ.
ಪ್ರಜಾಪ್ರಭುತ್ವದಲ್ಲಿ ನಮಗೆ ಇಷ್ಟವಾದ ಹಾಗೆ ಬದುಕಬಹುದು ಎನ್ನುವ ವಿಚಾರವನ್ನು ಮನದಟ್ಟು ಮಾಡಿಕೊಡುವುದು ಚಳುವಳಿಯ ಉದ್ದೇಶವಾಗಿದೆ. ಎಲ್ಲೆಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತೋ ಅಲ್ಲೆಲ್ಲ ಪ್ರತಿರೋಧ ಒಡ್ಡುವುದು, ದಕ್ಷಿಣಾಯನದ ಉದ್ದೇಶವಾಗಿದೆ ಎಂದರು.

ದಕ್ಷಿಣಾಯಣದ ಜಿಲ್ಲಾ ಸಂಚಾಲಕ ಪ್ರೊ. ರಾಜೇಂದ್ರ ಚೆನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಸಾಹಿತಿ ದೇವನೂರು ಮಹದೇವ, ಪ್ರೊ. ಜಿ. ಕೆ. ಗೋವಿಂದರಾವ್, ನಾ. ಡಿಸೋಜ, ಡಾ. ಹೆಚ್. ಎಸ್. ಅನುಪಮ, ಮಾಜಿ ಸಚಿವೆ ಬಿ. ಟಿ. ಲಲಿತಾ ನಾಯಕ್, ಪ್ರೊ. ಶ್ರೀಕಂಠ ಕೂಡಿಗೆ, ಕೆ. ಎಲ್. ಅಶೋಕ್, ನಾಗಭೂಷಣ ಸ್ವಾಮಿ ಚಂದ್ರೇಗೌಡ, ಪ್ರೊ. ಮೇಟಿ ಮಲ್ಲಿಕಾರ್ಜುನ ಸೇರಿದಂತೆ ಮೊದಲಾದವರಿದ್ದರು.

ಎಲ್ಲ ರಾಜಕೀಯ ಪಕ್ಷಗಳು ಕುಲಗೆಟ್ಟಿವೆ: ಸಾಹಿತಿ ಚಂಪಾ

’ದೇಶದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ಕುಲಗೆಟ್ಟು ಹೋಗಿವೆ’ ಎಂದು ಸಾಹಿತಿ ಪ್ರೋ. ಚಂದ್ರಶೇಖರ ಪಾಟೀಲರವರು ಕಿಡಿಕಾರಿದ್ದಾರೆ.
ನಗರದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ದಕ್ಷಿಣಾಯಣ ಚಳವಳಿಯ ಬರಹಗಾರರ, ಚಿಂತಕರ ಅಭಿವ್ಯಕ್ತಿ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಇರುವ ರಾಜಕೀಯ ಪಕ್ಷಗಳೆಲ್ಲ ರಾಜಕೀಯ ಗುಂಪುಗಳಾಗಿವೆ. ಅಧಿಕಾರ ಲಾಲಸೆ, ಸ್ವಾರ್ಥ ಹಿತಾಸಕ್ತಿಯಿಂದ ಈ ಗುಂಪುಗಳಲ್ಲಿಯೇ ಹೊಸ ಹೊಸ ಗುಂಪುಗಳು ಸೃಷ್ಟಿಯಾಗುತ್ತಿವೆ. ಅನಾಹುತ ಸೃಷ್ಟಿಸುತ್ತಿವೆ.

ಅಧಿಕಾರಕ್ಕಾಗಿ ವಯಸ್ಸಾದವರೂ ಸಹ ಪಕ್ಷಾಂತರ ಮಾಡುತ್ತಾರೆ. ಅಧಿಕಾರ ಚಪಲದಿಂದ ದೇಶ ವಿನಾಶದತ್ತ ಸಾಗುತ್ತಿದೆ. ಇದಕ್ಕೆಲ್ಲ ನಮ್ಮ ಮೌನವೇ ಕಾರಣವಾಗಿದ್ದು, ಮಾತನಾಡದಂತೆ ನಮ್ಮ ಬಾಯಿಗೆ ಬಟ್ಟೆ ತುರಕಲಾಗಿದೆ. ಇಂತಹ ಸನ್ನಿವೇಶದಲ್ಲಿ ಬರಹಗಾರರು, ಹೋರಾಟಗಾರರು ಎಚ್ಚೆತ್ತುಕೊಳ್ಳಬೇಕು. ಸ್ಪಷ್ಟ ನಿಲುವು ವ್ಯಕ್ತಪಡಿಸುವಂತಾಗಬೇಕು ಎಂದರು.

ಕರ್ನಾಟಕದಲ್ಲಿ ಚಳುವಳಿಗಳು ಸತ್ತು ಹೋಗಿವೆ ಎಂದು ಮಾತನಾಡಲಾಗುತ್ತಿದೆ. ಇದರಲ್ಲಿ ಯಾವುದೆ ಹುರುಳಿಲ್ಲವಾಗಿದೆ. ಚಳುವಳಿಗಳು ನಿರಂತರವಾಗಿದ್ದು, ಗುಪ್ತಗಾಮಿನಿಯಾಗಿ ಸದಾ ಕಾಲ ಹರಿಯುತ್ತಿರುತ್ತದೆ. ಆದರೆ ಕೆಲವೊಂದು ವರ್ಗದಿಂದ ಚಳವಳಿಗಳನ್ನು ಹತ್ತಿಕ್ಕುವ ಕೆಲಸ ಸದಾ ನಡೆಯುತ್ತಿರುತ್ತದೆ.

ಹೊಳೆಗಳಲ್ಲಿ, ನದಿಗಳಲ್ಲಿ, ನೀರು ಒಣಗಿದರೂ ಸಹ ಅದರ ಅಂತಃಸತ್ವದಲ್ಲಿ ಜೀವ ಸತ್ವವಿರುತ್ತದೆ. ಅದೇ ರೀತಿಯಲ್ಲಿ ಚಳವಳಿಗಳೂ ಸಹ ಹೊಸ ತಲೆಮಾರಿನ, ಹೊಸ ಬರಹಗಾರರ, ಚಿಂತಕರ ಮೂಲಕ ಜೀವಂತವಾಗಿದೆ ಎಂದರು. ಸಾಂಸ್ಕೃತಿಕ ಪ್ರತಿರೋಧದ ಚಳವಳಿಗಳು ಅವಶ್ಯಕವಾಗಿವೆ. ಬಿಕ್ಕಟ್ಟು ಎದುರಾದಾಗ, ಒಗ್ಗಟ್ಟನ್ನು ಪ್ರದರ್ಶಿಸಬೇಕು. ಚಳವಳಿ ಮುಂದುವರೆಯಬೇಕಾದರೆ, ಎಲ್ಲರೂ ಒಂದೂಗೂಡಲೇ ಬೇಕು. ಚಳವಳಿ ಮುಂದುವರೆಯದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ. ನಮಗೆ ಉಳಿಗಾಲವಿಲ್ಲ ಎಂದು ಸೂಚ್ಯವಾಗಿ ಹೇಳಿದರು.

ಸಮಾಜವಾದಿ, ಮಾರ್ಕ್ಸ್‌ವಾದಿ, ಲೋಹಿಯಾವಾದಿ, ಪ್ರಗತಿಪರರು, ಅಂಬೇಡ್ಕರ್‌ವಾದಿಗಳು ಜೊತೆಯಾಗಿ ಮುನ್ನಡೆಯುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ದಕ್ಷಿಣಾಯಾನ ಸಮಾವೇಶ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ತುಂಬಿ ತುಳುಕಿದ ಸಭಾಂಗಣ

ದಕ್ಷಿಣಾಯಣ ಚಳುವಳಿಯ ಬರಹಗಾರರ, ಚಿಂತಕರ ಸಮಾವೇಶಕ್ಕೆ ನಿರೀಕ್ಷೆ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು. ನಾಡಿನ ವಿವಿಧೆಡೆಯಿಂದ ಸಾಹಿತಿಗಳು, ಬರಹಗಾರರು, ಚಿಂತಕರು, ಪ್ರಗತಿಪರರು ಹೋರಾಟಗಾರರು ಆಗಮಿಸಿದ್ದರು. ಇಡೀ ಸಭಾಂಗಣ ತುಂಬಿ ತುಳುಕುತ್ತಿತ್ತು. ಕಾಲಿಡಲು ಆಗದಷ್ಟು ಜನಸಂದಣಿ ಕಂಡುಬಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News