ಉಪ ಚುನಾವಣೆ: ನಾಳೆ ಮತದಾನ; ಅರೆಸೇನಾ ಪಡೆ ತುಕಡಿ ಸೇರಿ ಬಿಗಿ ಪೊಲೀಸ್ ಸರ್ಪಗಾವಲು

Update: 2017-04-08 14:18 GMT

ಬೆಂಗಳೂರು, ಎ. 8: ರಾಜ್ಯದಲ್ಲಿ ತೀವ್ರ ಪ್ರತಿಷ್ಠೆ ಮತ್ತು ಕುತೂಹಲ ಸೃಷ್ಟಿಸಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆ ಎ.9ರ ಬೆಳಗ್ಗೆ 7ಗಂಟೆಯಿಂದ ಆರಂಭವಾಗಲಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಅರೆಸೇನಾ ಪಡೆ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

‘ಕ್ಷೇತ್ರದ ಮತದಾರರನ್ನು ಹೊರತುಪಡಿಸಿ ಯಾರೊಬ್ಬರೂ ಕ್ಷೇತ್ರದಲ್ಲಿ ಇರಬಾರದು’ ಎಂದು ಆಯೋಗದ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಘಟಾನುಘಟಿ ನಾಯಕರು ಕ್ಷೇತ್ರ ತೊರೆದಿದ್ದಾರೆ. ಮತದಾರರ ಮನ ಗೆಲ್ಲಲು ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ನಡೆಸಿದರು.

ನಂಜನಗೂಡು ಕ್ಷೇತ್ರದಲ್ಲಿ ಒಟ್ಟು 236 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಆ ಪೈಕಿ 72 ಅತಿಸೂಕ್ಷ್ಮ, 124 ಸೂಕ್ಷ್ಮ, 40 ಸಾಮಾನ್ಯ ಮತಗಟ್ಟೆಗಳಾಗಿವೆ. ಅದೇ ರೀತಿಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ 250 ಮತಗಟ್ಟೆಗಳಿದ್ದು ಆ ಪೈಕಿ 39 ಅತಿಸೂಕ್ಷ್ಮ, 33 ಸೂಕ್ಷ್ಮ ಹಾಗೂ 178 ಸಾಮಾನ್ಯ ಮತಗಟ್ಟೆಗಳೆಂದು ಆಯೋಗ ಘೋಷಿಸಿದೆ.

ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಕಾಂಗ್ರೆಸ್ ಪಕ್ಷದ ಕಳಲೆ ಕೇಶವಮೂರ್ತಿ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಅತ್ತ ಗುಂಡ್ಲುಪೇಟೆ ಕ್ಷೇತ್ರದಲ್ಲಿಯೂ ಕಾಂಗ್ರೆಸ್ಸಿನ ಗೀತಾ ಮಹದೇವ ಪ್ರಸಾದ್ ಹಾಗೂ ಬಿಜೆಪಿ ನಿರಂಜನ್ ಕುಮಾರ್ ನಡುವೆ ಹಣಾಹಣಿ ಸೃಷ್ಟಿಯಾಗಿದೆ.

ಬಿಗಿ ಬಂದೋಬಸ್ತ್: ಜಿದ್ದಾಜಿದ್ದಿನಿಂದ ಕೂಡಿರುವ ಉಪ ಚುನಾವಣೆ ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಎರಡೂ ಕ್ಷೇತ್ರಗಳಲ್ಲಿ ಅರೆಸೇನಾ ಪಡೆ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ನಂಜನಗೂಡು ಕ್ಷೇತ್ರದಲ್ಲಿ ಅರೆಸೇನಾ ಪಡೆಗಳ 6 ತುಕಡಿಗಳ ಜತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಸ್ತುವಾರಿಯಲ್ಲಿ ಒಟ್ಟು 2 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಮತದಾನದ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿಯೂ ಅರೆಸೇನಾ ಪಡೆ ಸೇರಿದಂತೆ ಒಟ್ಟು 1 ಸಾವಿರಕ್ಕೂ ಅಧಿಕ ಮಂದಿ ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಉಭಯ ಕ್ಷೇತ್ರದಲ್ಲಿ ಶನಿವಾರ ರಾತ್ರಿಯೆ ಮತಗಟ್ಟೆ ಸಿಬ್ಬಂದಿ ಮತ ಯಂತ್ರ, ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಿದ್ದಾರೆ.

ನಿಷೇಧಾಜ್ಞೆ ಜಾರಿ: ಮತಗಟ್ಟೆ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಐದು ಜನಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಅತಿಸೂಕ್ಷ್ಮ ಮತ್ತು ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎರಡೂ ಕ್ಷೇತ್ರಗಳ ಚುನಾವಣಾಧಿಕಾರಿಗಳು ಕ್ಷೇತ್ರದಾದ್ಯಂತ ಸಂಚರಿಸಿ ಮತಗಟ್ಟೆಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ನಾಳೆ(ಎ.9) ಬೆಳಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ನಂಜನಗೂಡು ಮತ್ತು ಗುಂಡ್ಲುಪೇಟೆ ಸೇರಿ ಎರಡೂ ಕ್ಷೇತ್ರದಲ್ಲಿ ವೀರಶೈವ ಮತ್ತು ದಲಿತ ಸಮುದಾಯದ ಮತಗಳೇ ನಿರ್ಣಾಯಕ. ಮತದಾನದ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎದೆಯಲ್ಲಿ ನಡುಕ ಆರಂಭವಾಗಿದೆ. ಎರಡೂ ಕೇತ್ರಗಳ ಫಲಿತಾಂಶ ಎ.13ಕ್ಕೆ ಪ್ರಕಟಗೊಳ್ಳಲಿದೆ.

ಮತದಾರರು

ನಂಜನಗೂಡು -2,00,498

 ಪುರುಷರು 1,01,267

ಮಹಿಳೆಯರು-99,231

ಒಟ್ಟು ಮತಗಟ್ಟೆಗಳು-236

ಗುಂಡ್ಲುಪೇಟೆ-2,00,862

 ಪುರುಷರು 1,00,144

ಮಹಿಳೆಯರು-1,00,701

ಒಟ್ಟು ಮತಗಟ್ಟೆಗಳು-250

ಮತದಾನ

ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ನಿಷೇಧಾಜ್ಞೆ ಜಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News