ಅನ್ನಭಾಗ್ಯ ಯೋಜನೆಯಲ್ಲಿ ಕಾರ್ಯಲೋಪಗಳಿದ್ದಲ್ಲಿ ನನಗೆ ದೂರು ನೀಡಿ: ಸಚಿವ ಮಲ್ಲಿಕಾರ್ಜುನ್

Update: 2017-04-08 15:13 GMT

ದಾವಣಗೆರೆ, ಎ.8: ಅನ್ನಭಾಗ್ಯ ಯೋಜನೆ ಮುಖ್ಯಮಂತ್ರಿಗಳ ಮಹದಾಸೆಯ ಯೋಜನೆಯಾಗಿದ್ದು, ಅದರ ಯಶಸ್ವಿಗೆ ಶ್ರಮಿಸಬೇಕಾಗಿದೆ. ಈ ಯೋಜನೆಯಲ್ಲಿ ಕಾರ್ಯಲೋಪಗಳಾದರೆ ನನಗೆ ನೇರವಾಗಿ ದೂರು ನೀಡಿ ಎಂದು ತೋಟಗಾರಿಕೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಹಾರ ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಅನ್ನಭಾಗ್ಯ ಯೋಜನೆಯ ಉಚಿತ ಹೆಚ್ಚುವರಿ ಅಕ್ಕಿ ವಿತರಣೆ ಹಾಗೂ ಜಾಗೃತಿ ಸಮಿತಿ ಸದಸ್ಯರಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ತಲಾ 5 ಕೆ.ಜಿ ಅಕ್ಕಿ ಬದಲಿಗೆ 7 ಕೆಜಿ ಅಕ್ಕಿ ನೀಡಲಾಗುತ್ತಿದ್ದು, ಹಸಿವು ಮುಕ್ತ ಕರ್ನಾಟಕ ಮಾಡಬೇಕೆಂಬ ಮುಖ್ಯಮಂತ್ರಿಯವರ ಕನಸು ನನಸಾಗಲು ಎಲ್ಲರೂ  ಈ ಯೋಜನೆಯ ಸದುಪಯೋಗ  ಪಡೆದುಕೊಳ್ಳಬೇಕು. ಯೋಜನೆಯ ಅಕ್ಕಿ ಯಾವುದೇ ಮಧ್ಯವರ್ತಿಗಳ ಪಾಲಾಗದಂತೆ ಅಧಿಕಾರಿಗಳು ಕಣ್ಗಾವಲು ಇಡಬೇಕು ಎಂದರು.

ಇದೇ ಸಂದರ್ಭ ದಾವಣಗೆರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿರುವ ವಾಸದ ಮನೆಗಳ ಸಕ್ರಮೀಕರಣ ಯೋಜನೆಯ 700 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಪ್ರಾಸ್ತಾವಿಕ ಮಾತನಾಗಳನ್ನಾಡಿದರು.

ವಿಪ ಸದಸ್ಯ ಅಬ್ದುಲ್ ಜಬ್ಬಾರ್, ಮಹಾನಗರ ಪಾಲಿಕೆ ಮಹಾಪೌರರಾದ ರೇಖಾ, ಜಿಪಂ ಉಪಾಧ್ಯಕ್ಷ ಸಿದ್ದಪ್ಪ, ನಗರ ಪಾಲಿಕೆ ಸದಸ್ಯ ದಿನೇಶ್‌ಶೆಟ್ಟಿ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ತಹಸೀಲ್ದಾರ್ ಸಂತೋಷಕುಮಾರ್, ಆಹಾರ ಮತ್ತು ಸರಬರಾಜು ಇಲಾಖೆಯ ಉಪ ನಿರ್ದೇಶಕ ಬಿ.ಟಿ ಮಂಜುನಾಥನ್ ಮತ್ತಿತರರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News