ರಥೋತ್ಸವ ಅಂಗವಾಗಿ ಮುಸ್ಲಿಂ ಯುವಕರಿಂದ ಕುಡಿಯುವ ನೀರು ವಿತರಣೆ

Update: 2017-04-08 17:45 GMT

ಕಡೂರು, ಎ.8: ಯುವಕರು ಜಾತಿ ಮನೋಭಾವ ತೊರೆದು ಮಾನವೀಯ ವೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್.ರಮೇಶ್ ಯುವಕರಿಗೆ ಕರೆ ನೀಡಿದರು. 

ಖಂಡಗದಹಳ್ಳಿ ಸೋಮೇಶ್ವರ ಜಾತ್ರಾ ಮಹೋತ್ಸವ ಮತ್ತು ಮಲ್ಲೇಶ್ವರ ಸ್ವರ್ಣಾಂ ದೇವಿಯ ರಥೋತ್ಸವದ ಅಂಗವಾಗಿ ಮರವಂಜಿ ವೃತ್ತದಲ್ಲಿ ಕಡೂರಿನ ಸಫಾ ಬ್ಯೆತುಲು ಮಾಲ್ ಎಜುಕೇಷನ್ ವೆಲ್ಫೇರ್ ಅಂಡ್ ಚಾರಿಟೆಬಲ್ ಟ್ರಸ್ಟ್‌ನ ಯುವಕರು ಏರ್ಪಡಿಸಿದ್ದ ಶುದ್ಧ ಕುಡಿಯುವ ನೀರಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಪಟ್ಟಣದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಅಣ್ಣ-ತಮ್ಮಂದಿರಂತೆ ಜೀವನ ನಡೆಸುತ್ತಿದ್ದಾರೆ. ಆದರೆ ಕೆಟ್ಟ ರಾಜಕೀಯ ವ್ಯವಸ್ಥೆ ಜಾತಿ, ಧರ್ಮಗಳ ನಡುವೆ ಜಗಳ ತಂದು ಹೊಡೆದಾಡಿಸುತ್ತಿವೆ. ಇಂತಹವರನ್ನು ದೂರವಿಟ್ಟು ಮಾನವೀಯತೆಯತ್ತ ಗಮನ ಹರಿಸಲು ಯುವಕರು ಮುಂದೆ ಬರಬೇಕಾಗಿದೆ ಎಂದರು. 

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಆನಂದ ಮಾತನಾಡಿ, ಬರಗಾಲದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಮುಸ್ಲಿಂ ಯುವಕರ ಕಾರ್ಯ ಶ್ಲಾಘನೀಯ. ಯುವಕರು ಮೊದಲು ಸಮಾಜ ಮುಖಿಯಾಗಿ ಬಡವರ, ದೀನ ದಲಿತರ ಪರವಾಗಿ ಉತ್ತಮ ಕೆಲಸ ಮಾಡಿದರೆ ಅದರಂತಹ ಪುಣ್ಯ ಬೇರೊಂದಿಲ್ಲ ಎಂದು ನುಡಿದರು.

ಪುರಸಭೆ ಸದಸ್ಯ ತೋಟದ ಮನೆ ಮೋಹನ ಮಾತನಾಡಿದರು.

ಟ್ರಸ್ಟ್‌ನ ಕಾರ್ಯದರ್ಶಿ ಇರ್ಫಾನ್  ಮಾತನಾಡಿ, ನಮ್ಮ ಟ್ರಸ್ಟ್ ಸಾರ್ವಜನಿಕರ ಸೇವೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಬಡ ರೋಗಿಗಳಿಗೆ ಉಚಿತ ಹಣ್ಣು ನೀಡುವುದಲ್ಲದೆ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದವರನ್ನು ಗುರುತಿಸಿ ಹೆಚ್ಚಿನ ಚಿಕಿತ್ಸೆಗೆ ಸಹಾಯ ನೀಡುತ್ತಿದೆ. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ನಾಗರಿಕರು ಕುಡಿಯುವ ನೀರಿಗಾಗಿ ಪ್ರತಿದಿನ ಪರಿತಪಿಸುವಂತಾಗಿದೆ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಮುಹಿದ್ದಿನ್ ಮಾತನಾಡಿ, ಯುವಕರು ಸಮಾಜಕ್ಕೆ ಉಪಯೋಗವಾಗುವ ಚಟುವಟಿಕೆಗಳಲ್ಲಿ ತೊಡಗಿಕೊಂಡು ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಶ್ರಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಟ್ರಸ್ಟ್‌ನ ಕಲೀಂ, ಸಲೀಂ, ನಾಸೀರ್, ಇಸಾಖ್, ಇಮ್ರಾನ್, ಅನೀಪ್, ರೂಮಾನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News