ಸಾಲಬಾಧೆ: ರೈತ ಆತ್ಮಹತ್ಯೆ

Update: 2017-04-08 18:02 GMT

ಮಂಡ್ಯ, ಎ.8: ಸಾಲಬಾಧೆ ತಾಳಲಾರದೆ ರೈತರೊಬ್ಬರು ಶನಿವಾರ ಮುಂಜಾನೆ ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಬೀರುವಳ್ಳಿ ಗ್ರಾಮದ ರೈತ ಬಿ.ಕೆ.ಸುರೇಶ್ ಆತ್ಮಹತ್ಯೆ ಮಾಡಿಕೊಂಡಿರುವ ರೈತ.

ಸುರೇಶ್ 2.20 ಎಕರೆ ಜಮೀನಿನಲ್ಲಿ ಹಾಕಿದ್ದ ಬೆಳೆ ಮಳೆಯಿಲ್ಲದೆ ಒಣಗಿ ಹೋಗಿ ನಷ್ಟ ಅನುಭವಿಸಿದ್ದಲ್ಲದೆ, ಆಕಸ್ಮಿಕ ಬೆಂಕಿಬಿದ್ದು, ತೆಂಗು ಮತ್ತು ಅಡಿಕೆ ತೋಟ ಸುಟ್ಟು ಭಸ್ಮವಾಗಿತ್ತು ಎಂದು ತಿಳಿದು ಬಂದಿದೆ. ಕೃಷಿ ಚಟುವಟಿಕೆಗಾಗಿ ಸುರೇಶ್ ಮಂದಗೆರೆ ವಿಜಯ ಬ್ಯಾಂಕ್‌ನಲ್ಲಿ ಜಮೀನನ್ನು ಅಡವಿಟ್ಟು 1 ಲಕ್ಷ ರೂ. ಜತೆಗೆ 2 ಲಕ್ಷ ಕೈಸಾಲ ಮಾಡಿದ್ದು, ಸಾಲ ತೀರಿಸಲು ಸಾಧ್ಯವಾಗದೆ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಮೃತರು ಪತ್ನಿ ಮಂಜುಳಮ್ಮ, ಮಗ ಪುನೀತ್, ಓರ್ವ ಪುತ್ರಿಯನ್ನು ಅಗಲಿದ್ದು, ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.

ಎಂಜಿನಿಯರ್ ಪದವೀಧರ ಆತ್ಮಹತ್ಯೆ: ಕೆ.ಆರ್.ಪೇಟೆ ತಾಲೂಕು ವಿಠಲಾಪುರ ಗ್ರಾಮದಲ್ಲಿ ಕೃಷಿ ಮಾಡಿಕೊಂಡಿದ್ದ ಎಂಜಿನಿಯರ್ ಪದವೀಧರ ಮೋಹನ್ (28) ಜಮೀನಿನ ಪಂಪ್‌ಹೌಸ್ ಬಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಸಂಜೆ 5 ಗಂಟೆಗೆ ಜಮೀನಿಗೆ ಹೋದ ಮೋಹನ್ ಸಂಜೆಯಾದರು ಮನೆಗೆ ಮರಳದ ಹಿನ್ನೆಲೆಯಲ್ಲಿ ಮನೆಯವರು ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ತನಿಖೆ ಕೈಗೊಂಡಿರುವ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News