ಮಹಿಳೆಯನ್ನು ನೆಲಕ್ಕೆ ಬಡಿದು ಕೊಂದುಹಾಕಿದ ಕಾಡಾನೆ
ಸುಂಟಿಕೊಪ್ಪ, ಎ.9: ಕಾಡಾನೆ ದಾಳಿಯಿಂದ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ 7ನೆ ಹೊಸಕೋಟೆಯಲ್ಲಿ ಸಂಭವಿಸಿದೆ. ಇಲ್ಲಿನ ಮೆಟ್ನಹಳ್ಳ ನಿವಾಸಿ ದಿವಂಗತ ಮಣಿ ಅವರ ಪತ್ನಿ ಸರೋಜ (45) ಎಂದಿನಂತೆ ಮನೆಗೆಲಸದಲ್ಲಿ ನಿರತವಾಗಿದ್ದ ಸಂದರ್ಭ ಬೆಳಗ್ಗೆ 6:15ರ ಸುಮಾರಿಗೆ ಮನೆಯ ಹಿಂಬದಿಗೆ ತೆರಳಿದ್ದರು. ಈ ಸಂದರ್ಭ ಪಕ್ಕದ ಈರಪ್ಪ ಎಂಬವರ ತೋಟದಲ್ಲಿ ಬೀಡುಬಿಟ್ಟಿದ ಕಾಡಾನೆ ದಾಳಿ ನಡೆಸಿದ್ದು, ಸರೋಜಾರನ್ನು ಸೊಂಡಿಲಿನಿಂದ ಎತ್ತಿ ನೆಲೆಕ್ಕೆ ಬಡಿದಿದೆ. ಪರಿಣಾಮ ಸರೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಠಾಣಾಧಿಕಾರಿ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಸ್ಥಳೀಯ ನಿವಾಸಿಗಳಲ್ಲಿ ಆತಂಕ: ಹೊಸಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆಟ್ನಹಳ್ಳ ಗ್ರಾಮ ಹಾಗೂ ಕೊಡಗರಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಅಂದಗೋವೆ ಪೈಸಾರಿ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿದ್ದು, ಈ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಾಗುತ್ತಿದೆ. ಹಾಡಹಗಲಿನಲ್ಲೇ ಕಾಡಾನೆಗಳು ತೋಟಗಳಿಗೆ ನುಗ್ಗುತ್ತಿರುವುದರಿಂದ ಕೆಲಸ ಮಾಡಿಸಲಾಗದೆ ಬದುಕು ದುಸ್ತರವಾಗಿದೆ ಎಂದು ತೋಟಗಳ ಮಾಲಕರು ಅಳಲು ತೋಡಿಕೊಂಡಿದ್ದಾರೆ.
ಜನಪ್ರತಿನಿಧಿಗಳ ಅಸಮಾಧಾನ: ಆನೆಕಾಡು ಅರಣ್ಯ ಅಂಚಿನಲ್ಲಿ ಕಾಡಾನೆಗಳು ನಾಡಿಗೆ ಬರದಂತೆ ಅರಣ್ಯ ಇಲಾಖೆ ಹಾಗೂ ಸರಕಾರ ಕೋಟ್ಯಾಂತರ ರೂ. ವ್ಯಯಿಸಿ ಟ್ರಂಚ್ ನಿರ್ಮಿಸಿದ್ದರೂ ಅವುಗಳು ಅವೈಜ್ಞಾನಿಕವಾಗಿದೆ. ಕಾಡಾನೆಗಳು ಆಹಾರ ಅರಸಿ ತೋಟಗಳಿಗೆ ಲಗ್ಗೆಯಿಡುತ್ತಿದ್ದು ಕೃಷಿ ಫಸಲನ್ನು ದ್ವಂಸಗೊಳಿಸುತ್ತಿದೆ. ಇದೀಗ ಓರ್ವ ಮಹಿಳೆಯನ್ನೂ ಕೊಂದು ಹಾಕಿದೆ. ಇದು ಆತಂಕದ ವಿಚಾರವಾಗಿದೆ ಎಂದಿರುವ 7ನೇ ಹೊಸಕೋಟೆ ಗ್ರಾಪಂ ಉಪಾಧ್ಯಕ್ಷ ಮುಸ್ತಫಾ, ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಇಲಾಖಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ.