ನಂಜನಗೂಡು ಶೇ.77, ಗುಂಡ್ಲುಪೇಟೆ ಶೇ.78 ಮತದಾನ

Update: 2017-04-09 17:22 GMT

ಬೆಂಗಳೂರು, ಎ.9: ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯೆಂದೇ ಹೇಳಲಾಗುತ್ತಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತ ಅಂತ್ಯಕಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರವಾಗಿದೆ.

 ರವಿವಾರ ಬೆಳಗ್ಗೆ 7 ಗಂಟೆಯಿಂದಲೇ ಎರಡೂ ಕ್ಷೇತ್ರಗಳಲ್ಲಿ ನಿಧಾನಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ಬಳಿಕ ಕೊಂಚ ಬಿರುಸುಪಡೆದುಕೊಂಡು ನಂಜನಗೂಡಿನಲ್ಲಿ ಸಂಜೆ 5ರ ವೇಳೆಗೆ ಶೇ.77, ಗುಂಡ್ಲುಪೇಟೆಯಲ್ಲಿ ಶೇ.78 ಮತ ಚಲಾವಣೆಯಾಗಿದೆ. ಮತಯಂತ್ರದಲ್ಲಿ ದೋಷ, ಕೊನೆಯ ಕ್ಷಣದಲ್ಲಿ ಮತದಾರರ ಓಲೈಕೆ, ಹಣ ಹಂಚಿಕೆ, ಮೊಬೈಲ್ ಕರೆನ್ಸಿ ವಿತರಣೆ ಸೇರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ಲಘುಲಾಠಿ ಪ್ರಹಾರ ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆ ವರದಿ ಆಗಿಲ್ಲ.

ರಾಜ್ಯದಲ್ಲಿ ತೀವ್ರ ಪ್ರತಿಷ್ಠೆ ಮತ್ತು ಪೈಪೋಟಿ ಸೃಷ್ಟಿಸಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿದ ಮಹಿಳೆಯರು, ವೃದ್ಧರು ಸೇರಿದಂತೆ ಯುವಜನರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಕಳಲೆ ಕೇಶವಮೂರ್ತಿ ತಮ್ಮ ಸ್ವಗ್ರಾಮ ಕಳಲೆಯ ಲೋಕಶಿಕ್ಷಣ ಕೇಂದ್ರದಲ್ಲಿ 119ನೆ ಮತಗಟ್ಟೆಯಲ್ಲಿ ಬೆಳ್ಳ ಬೆಳಗ್ಗೆಯೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಅತಿಸೂಕ್ಷ್ಮ ಮತಗಟ್ಟೆಯೆಂದು ಗುರುತಿಸಿರುವ ಕ್ಷೇತ್ರದ ‘ಬದನವಾಳು’ ಗ್ರಾಮದಲ್ಲಿ ಶಾಂತಿಯುತ ಮತದಾನ ನಡೆಯಿತು.

ಇದೇ ಕ್ಷೇತ್ರ ವ್ಯಾಪ್ತಿಯ ಕರಿಹುಂಡಿ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿಯೆ ಪಕ್ಷಪಾತ ಧೋರಣೆ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ಚುನಾವಣಾಧಿಕಾರಿಗಳು, ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಯಾಯಿತು.

ಕರೆನ್ಸಿ ವೋಚರ್: ನಂಜನಗೂಡಿನ ಅಶೋಕಪುರಂ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೇಸರಿ ಟಿ-ಶರ್ಟ್ ಧರಿಸಿ ಮತದಾರರಿಗೆ ಮೊಬೈಲ್ ಕರೆನ್ಸಿ ವೋಚರ್ ಹಂಚುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು. ಹೀಗಾಗಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ತಕ್ಷಣವೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತಗಟ್ಟೆ ವ್ಯಾಪ್ತಿಯಿಂದ ಕಾರ್ಯಕರ್ತರನ್ನು ಹೊರಗೆ ಕಳುಹಿಸಿದರು. ಕೂಡಲೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಬಲಗೈಗೆ ಶಾಯಿ: ಇಲ್ಲಿನ ಮತಗಟ್ಟೆ ಸಂಖ್ಯೆ 49ರಲ್ಲಿ ಚುನಾವಣಾ ಸಿಬ್ಬಂದಿ ಎಡಗೈ ತೋರು ಬೆರಳಿನ ಬದಲಿಗೆ ಬಲಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಅಲ್ಲದೆ, ಇದಕ್ಕೆ ಆಕ್ಷೇಪವೂ ವ್ಯಕ್ತವಾಯಿತು. ಕೂಡಲೇ ಚುನಾವಣಾಧಿಕಾರಿಗಳು ಸರಿಪಡಿಸಿದರು.

ಲಾಠಿ ಪ್ರಹಾರ: ಗುಂಡ್ಲುಪೇಟೆ ಪಟ್ಟಣದ ವಾರ್ಡ್ ನಂ 14ರ 206ನೆ ಸಂಖ್ಯೆ ಮತಗಟ್ಟೆ ಒಳಗೆ ಬಿಜೆಪಿ ಕಾರ್ಯಕರ್ತರು ಮತದಾರರ ಓಲೈಕೆ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದು ವರದಿಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ತಮ್ಮ ಪುತ್ರ ಗಣೇಶ್ ಹಾಗೂ ಸೊಸೆಯೊಂದಿಗೆ ಮಹದೇವ ಪ್ರಸಾದ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ಸ್ವಗ್ರಾಮ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ತಮ್ಮ ಕುಟುಂಬದ ಸದಸ್ಯರೊಂದಿಗೆ ತಾಲೂಕಿನ ಚೌಡಹಳ್ಳಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ತೆರಕಣಾಂಬಿ ಹುಂಡಿ, ಮಡಹಳ್ಳಿ, ಮತಗಟ್ಟೆ ಸಂಖ್ಯೆ 105-106 ಹಾಗೂ ಭೀಮನಮಡು ಗ್ರಾಮದ ಮತಯಂತ್ರದಲ್ಲಿ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕೆಲ ಕಾಲ ಮತದಾನ ವಿಳಂಬವಾಗಿತ್ತು. ಚುನಾವಣಾಧಿಕಾರಿಗಳು ಪರಿಶೀಲಿಸಿ ದೋಷ ಸರಿಪಡಿಸಿದ್ದರಿಂದ ಬಳಿಕ ಸುಗಮ ಮತದಾನ ನಡೆಯಿತು.

ಬೇಗೂರಿನ ಮತಗಟ್ಟೆ ಸಂಖ್ಯೆ 18, 19, 20ರ ಮತಕೇಂದ್ರದ ಬಳಿ ಪ್ರಚಾರ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ಏರ್ಪಟ್ಟಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ನಂಜನಗೂಡು ಕ್ಷೇತ್ರದಲ್ಲಿ ವಿ.ಶ್ರೀನಿವಾಸ ಪ್ರಸಾದ್(ಬಿಜೆಪಿ), ಕಳಲೆ ಕೇಶವ ಮೂರ್ತಿ(ಕಾಂಗ್ರೆಸ್) ಸೇರಿದಂತೆ ಒಟ್ಟು 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದೇ ರೀತಿ ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವ ಪ್ರಸಾದ್ (ಕಾಂಗ್ರೆಸ್), ನಿರಂಜನ್ ಕುಮಾರ್(ಬಿಜೆಪಿ) ಸೇರಿದಂತೆ ಒಟ್ಟು 13 ಮಂದಿ ಅಭ್ಯರ್ಥಿಗಳಿದ್ದಾರೆ.

ಕಂದೇಗಾಲ: ಕೈಕೊಟ್ಟ ಮತಯಂತ್ರ ರಾತ್ರಿ 8 ಗಂಟೆ ತನಕ ಮತದಾನ

ಬೆಂಗಳೂರು, ಎ.9: ಗುಂಡ್ಲುಪೇಟೆ ಕ್ಷೇತ್ರ, ಕಂದೇಗಾಲ ಗ್ರಾಮದ ಮತಗಟ್ಟೆಯಲ್ಲಿ ತಾಂತ್ರಿಕ ದೋಷದಿಂದ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನದ ಅವಧಿ ಮುಕ್ತಾಯದ ಬಳಿಕವೂ ರಾತ್ರಿ 8 ಗಂಟೆವರೆಗೆ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು.

  ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಿಸಲಾಯಿತು. ಗ್ರಾಮದಲ್ಲಿ ಒಟ್ಟು 1,255 ಮತದಾರರ ಪೈಕಿ ಮಧ್ಯಾಹ್ನದ ವೇಳೆಗೆ 487ಮತಗಳು ಚಲಾವಣೆಯಾಗಿದ್ದವು. ಈ ವೇಳೆಗೆ ಮತಯಂತ್ರದಲ್ಲಿನ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸುಮಾರು 2ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತು.

ಆ ನಂತರ ತಾಂತ್ರಿಕ ದೋಷ ಸರಿಪಡಿಸಿದ್ದು, ಸಂಜೆ 5ಗಂಟೆಯೊಳಗೆ ಮತಗಟ್ಟೆಗೆ ಆಗಮಿಸಿದ ಮತದಾರರಿಗೆ ರಾತ್ರಿ 8ಗಂಟೆಯ ವರೆಗೆ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾ ಬಹಿಷ್ಕಾರ

ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮಹದೇವ ನಗರ ಮತಗಟ್ಟೆಯಲ್ಲಿ ಜನರು ಮತದಾನ ಬಹಿಷ್ಕರಿಸಿದ್ದರು. ಮೂಲಸೌಲಭ್ಯ ಕಲ್ಪಿಸಲು ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ ವಹಿಸಿದ್ದಾರೆ. ಹೀಗಾಗಿ ತಾವು ಮತದಾನ ಮಾಡುವುದಿಲ್ಲ ಎಂದು ಸ್ಥಳೀಯರು ಗಮನ ಸೆಳೆದಿದ್ದಾರೆ.

ಸಂಹಿತೆ ಉಲ್ಲಂಘನೆ

ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ತನ್ನ ಸ್ವಗ್ರಾಮದಲ್ಲಿ ಮತಗಟ್ಟೆ 119ರಲ್ಲಿ ಹಕ್ಕು ಚಲಾಯಿಸುವ ವೇಳೆ ತನ್ನ ಕೊರಳಿನಲ್ಲಿ ಹಸ್ತದ ಗುರುತಿನ ಶಾಲು ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರು ದಾಖಲಾಗಿದೆ.

ಹಕ್ಕು ಚಲಾಯಿಸಿ ಇಹಲೋಕ ತ್ಯಜಿಸಿದ ವೃದ್ಧೆ

 ಗುಂಡ್ಲುಪೇಟೆ ಕ್ಷೇತ್ರದ ಅಂಗಳ ಗ್ರಾಮ ದೇವಮ್ಮ (83) ಎಂಬ ವೃದ್ಧೆ ಬಹುದಿನಗಳಿಂದ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬಳಲುತ್ತಿದ್ದರು. ಈ ಮಧ್ಯೆ ಅವರು ತನ್ನ ಹಕ್ಕು ಚಲಾಯಿಸಿದ ಬಳಿಕ ಮನೆಗೆ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ಅಸುನೀಗಿದ್ದಾರೆ. ಬಿಸಿಲಿನ ತಾಪದಿಂದ ದಣಿದಿದ್ದ ದೇವಮ್ಮ ಕುಡಿಯಲು ನೀರು ಬೇಕೆಂದು ಕೇಳಿದರು. ಸ್ವಲ್ಪ ಕುಡಿಯುತ್ತಿದ್ದಂತೆಯೇ ಅವರು ಅಸುನೀಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News