ಮೂಡಿಗೆರೆ ತಾಲೂಕಿನಾದ್ಯಂತ ಅನಿಯಮಿತ ಲೋಡ್‌ಶೆಡ್ಡಿಂಗ್: ಗ್ರಾಹಕರಿಂದ ಪ್ರತಿಭಟನೆಯ ಎಚ್ಚರಿಕೆ
ಮೂಡಿಗೆರೆ, ಎ.9: ತಾಲೂಕಿನ ಗೋಣಿಬೀಡು, ಮಾಕೋನಹಳ್ಳಿ, ದಾರದಹಳ್ಳಿ, ಬಣಕಲ್, ಕೊಟ್ಟಿಗೆಹಾರ, ಬಾಲೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಮೆಸ್ಕಾಂ ಅಧಿಕಾರಿಗಳು ಲೋಡ್‌ಶೆಡ್ಡಿಂಗ್ ನೆಪದಲ್ಲಿ ಗ್ರಾಮಸ್ಥರಿಗೆ ವಿದ್ಯುತ್ ನೀಡದೇ ವಂಚಿಸುತ್ತಿದ್ದಾರೆ ಎನ್ನುವ ಆರೋಪಗಳು ಗ್ರಾಹಕರಿಂದ ವ್ಯಕ್ತವಾಗಿದೆ.
ಮಳೆ ಬಂದರೆ ಲೈನ್ ಟ್ರಬಲ್ ನೆಪದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಪದೇ ಪದೇ ನಡೆಯುತ್ತದೆ. ವಿವಿಧೆಡೆ ವಿದ್ಯುತ್ ಇಲ್ಲದೇ ಜನರು ಪರದಾಡುತ್ತಿದ್ದರೆ, ಎಸೆಸೆಲ್ಸಿ ಮಕ್ಕಳು, ಹಾಸ್ಟೆಲ್ ವಿದ್ಯಾರ್ಥಿಗಳು ವಿದ್ಯುತ್ ಇಲ್ಲದೆ ಪರೀಕ್ಷೆಗೆ ಮೊಂಬತ್ತಿ ಹಚ್ಚಿಕೊಂಡು ಓದುವ ದೃಶ್ಯಗಳು ಸಾಮಾನ್ಯವಾಗಿವೆ. ಪ್ರತಿನಿತ್ಯ ಬೆಳಗ್ಗಿನಿಂದ ಮಧ್ಯಾಹ್ನದವೆರೆಗೆ ಅಥವಾ ಮಧ್ಯಾಹ್ನದಿಂದ ಸಂಜೆಯವರೆಗೆ ಲೋಡ್ ಶೆಡ್ಡಿಂಗ್ ನಡೆಯುತ್ತಿದೆಯಾದರೂ ಸಣ್ಣ ಮಟ್ಟಿನ ಮಳೆ ಬಂದರೂ, ಬಾರದಿದ್ದರೂ ವಿದ್ಯುತ್ ಕಣ್ಣಾಮುಚ್ಚಾಲೆ ತಪ್ಪಿದ್ದಲ್ಲ. ಕೆಲವೆಡೆ ರಾತ್ರಿಯಾದರೂ ವಿದ್ಯುತ್ ಬಾರದಿದ್ದಾಗ ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ, ಅಥವಾ ಹೋಗಿ ವಿಚಾರಿಸಿದವರಿಗೆ ಮೆಸ್ಕಾಂ ಕಚೇರಿಯಲ್ಲಿ ಸೌಜನ್ಯದ ಮಾತು ಬರುತ್ತಿಲ್ಲ ಎನ್ನುವ ಆರೋಪಗಳೂ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಬಣಕಲ್ ಗ್ರಾಪಂ ಅಧ್ಯಕ್ಷ ಬಿ.ವಿ. ಸುರೇಶ್ ಬಣಕಲ್ ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಲೈನ್ ಟ್ರಬಲ್ ಇದೆ, ಸರಿಯಾಗುತ್ತೆ ಎನ್ನುವ ಉತ್ತರ ಬಂದಿದೆ. ರಾತ್ರಿ 10 ಗಂಟೆಗೆ ಬಂದ ವಿದ್ಯುತ್ ಕಣ್ಣಾಮುಚ್ಚಾಲೆಯಾಡಿ ಅರ್ಧ ಗಂಟೆ ಜನರಿಗೆ ದರ್ಶನ ಕೊಟ್ಟು ಮತ್ತೆ ಕೈಕೊಟ್ಟಿದೆ. ರವಿವಾರವೂ ಬೆಳಿಗ್ಗೆಯಿಂದಲೇ ವಿದ್ಯುತ್ ಕೈಕೊಟ್ಟಿದೆ. ಲೋಡ್ ಶೆಡ್ಡಿಂಗ್ ಇಲ್ಲ ಎಂದು ಸಚಿವರು ಹೇಳಿದ್ದರೂ ಬಣಕಲ್‌ನಲ್ಲಿ ವಿದ್ಯುತ್ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜನತೆ ಎಚ್ಚರಿಕೆ ನೀಡಿದ್ದಾರೆ.