ನೂತನ ಜಾಲಿ ಪಪಂ ಮೂಲ ಸೌಕರ್ಯಕ್ಕೆ ಒತ್ತು: ಶಾಸಕ ಮಾಂಕಾಳ್ ವೈದ್ಯ
ಭಟ್ಕಳ, ಎ.9: ನೂತನ ಜಾಲಿ ಪಪಂ ಸಮಗ್ರ ಅಭಿವೃದ್ಧಿಗಾಗಿ 10 ಕೋಟಿ ರೂ. ಪ್ರಸ್ತಾಪ ಸಲ್ಲಿಸಿದ್ದು, ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಮಾಂಕಾಳು ವೈದ್ಯ ಹೇಳಿದರು.
ಜಾಲಿ ಪಪಂ ವ್ಯಾಪ್ತಿಯ ನಾಮಧಾರಿ ಸಭಾಭವನದಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮ ಹಾಗೂ ವಿವಿಧ ಯೋಜನೆಯಡಿ ಆಯ್ಕೆಯಾದ ಆರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಜಾಲಿ ಪಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನುಂಟು ಮಾಡುತ್ತಿದ್ದರೂ ಊರನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಅಲ್ಲಿನ ನಾಗರಿಕರ ಕರ್ತವ್ಯವಾಗಿದೆ. ತ್ಯಾಜ್ಯ ವಿಲೇವಾರಿಗಾಗಿ ವಾಹನಗಳನ್ನು ನೀಡಲಾಗಿದೆ. ತ್ಯಾಜ್ಯ ಸಂಗ್ರಹ ಘಟಕವನ್ನು ನಿರ್ಮಿಸುವ ಉದ್ದೇಶವಿದ್ದು ಇದಕ್ಕಾಗಿ ಸ್ಥಳವನ್ನು ಗುರುತಿಸಿದ್ದು ಅರಣ್ಯ ಇಲಾಖೆಯ ಮಂಜೂರಿಗಾಗಿ ನಿರೀಕ್ಷೆಯಲ್ಲಿದ್ದು, ಅರಣ್ಯ ಇಲಾಖೆಯ ಮಂಜೂರಿಯ ನಂತರ ಸಮಸ್ಯೆ ಬಗೆಹರಿಯುತ್ತದೆ ಎಂದರು.
ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಲಕ್ಷ್ಮೀ ಮಾದೇವ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಆದಂ ಪಣಂಬರು, ಮುಖ್ಯಾಧಿಕಾರಿ ವೆಂಕಟೇಶ ನಾವುಡ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತಿದ್ದರು.