ಮಹಿಳೆಯ ಸ್ಥಾನಮಾನ ಇಂದಿಗೂ ದ್ವಿತೀಯ ದರ್ಜೆಯದ್ದು ಎನ್ನುವುದು ವಿಷಾದದ ಸಂಗತಿ: ಕಾಗೋಡು
ಸಾಗರ, ಎ.9: ಜಗತ್ತಿನಲ್ಲಿ ಮಹಿಳೆ ಅನುಭವಿಸಿದ್ದಷ್ಟು ಶೋಷಣೆಯನ್ನು ಬೇರೆ ಯಾರೂ ಅನುಭವಿಸಿಲ್ಲ. ಗಂಡಿನ ಪ್ರತಿಯೊಂದು ಏಳಿಗೆಯಲ್ಲೂ ನೆರಳಿನಂತೆ ಇರುವ ಮಹಿಳೆ ಸ್ಥಾನಮಾನ ಇಂದಿಗೂ ದ್ವಿತೀಯ ದರ್ಜೆಯದ್ದು ಎನ್ನುವುದು ವಿಷಾದದ ಸಂಗತಿ ಎಂದು ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ನಗರಸಭೆ ಸಭಾಭವನದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ, ಸಾಧಕ ಮಹಿಳೆಯರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಮನೆ, ಮಕ್ಕಳು, ಕುಟುಂಬ ನಿರ್ವಹಣೆ ಜೊತೆಗೆ ಸಮಾಧಾನ, ಪ್ರೀತಿ, ಸಹನೆಯ ಸ್ವರೂಪವಾಗಿರುವ ಮಹಿಳೆಯನ್ನು ನಾವು ಸದಾ ನೆನಪಿಸಿಕೊಳ್ಳಬೇಕು. ನಮ್ಮ ಸಂವಿಧಾನದಲ್ಲಿ ಸಮಾನತೆಯ ಅಂಶ ಅಡಕವಾಗಿದ್ದರೂ ಮಹಿಳೆಯ ವಿಷಯ ಬಂದಾಗ ಸ್ಥಾನಮಾನ ನೀಡುವ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವ ಪ್ರವೃತ್ತಿ ಜಾಸ್ತಿಯಾಗುತ್ತಿದೆ ಎಂದವರು ವಿಷಾದಿಸಿದರು.
ನಗರಸಭೆ ಅಧ್ಯಕ್ಷೆ ಎನ್.ಉಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಾಂತಮ್ಮ ಕುಮಾರಸ್ವಾಮಿ (ಸಂಗೀತ), ಲಲಿತಮ್ಮ ಎನ್. (ಉದ್ಯಮ), ಎನ್.ಎಸ್.ಪಾರ್ವತಿ (ಉತ್ತಮ ಸೇವೆ), ಲಯನ ಡಿ. (ಕ್ರೀಡಾ ಕ್ಷೇತ್ರ), ಶಬಾನ ಬಾನು (ಸೇವಾ ಕ್ಷೇತ್ರ), ರೂಪಕಲಾ (ಉದ್ಯಮ), ಎಮಿಲ್ಡಾ ಡಿಸೋಜ, ಸಾವಿತ್ರಿ ಬಾಯಿ (ಸಮಾಜ ಸೇವೆ), ಟಿ.ಆರ್. ಆಶಾ (ಶೈಕ್ಷಣಿಕ ಕ್ಷೇತ್ರ), ಲಕ್ಷ್ಮೀರಾಜು, ಪೊನ್ನಮ್ಮ (ಪೌರಕಾರ್ಮಿಕ ಕ್ಷೇತ್ರ) ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಮರಿಯಾ ಲೀಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜೂರಾಲಿ ಖಾನ್, ಸದಸ್ಯರಾದ ಗಣಾಧೀಶ್, ಸುಂದರಸಿಂಗ್, ಜಿ.ಕೆ.ಭೈರಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಜ್ಯೋತಿ ಮುರಳೀಧರ್, ಪೌರಾಯುಕ್ತ ಎಸ್.ರಾಜು ಇನ್ನಿತರರು ಉಪಸ್ಥಿತರಿದ್ದರು.